ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಸದ್ದಿಲ್ಲದೆ ಏರಿಕೆಯಾಗುತ್ತಿದ್ದು, ಇದರ ನಡುವೆ ಹೆಚ್3ಎನ್2 ಭೀತಿ ಕೂಡ ಹೆಚ್ಚಿದೆ. ರಾಜ್ಯದಲ್ಲಿ 115 ಹೆಚ್3ಎನ್2 ಪ್ರಕರಣಗಳು ಪತ್ತೆಯಾಗಿವೆ.
ಸಾಂದರ್ಭಿಕ ಚಿತ್ರ
ಬೆಂಗಳೂರು: ರಾಜ್ಯದಲ್ಲಿ ಕೊರೊನಾ (Covid) ಪ್ರಕರಣಗಳ ಸಂಖ್ಯೆ ಸದ್ದಿಲ್ಲದೆ ಏರಿಕೆಯಾಗುತ್ತಿದೆ. ಇದರ ನಡುವೆ ಹೆಚ್3ಎನ್2 (H3N2) ಭೀತಿ ಕೂಡ ಹೆಚ್ಚಿದೆ. ರಾಜ್ಯದಲ್ಲಿ ಪ್ರಸ್ತುತ ಕಳೆದ 82 ದಿನಗಳಲ್ಲಿ (ಜನವರಿ-ಮಾರ್ಚ್ 15 ರ ತನಕ) 115 ಹೆಚ್3ಎನ್2 ಪ್ರಕರಣಗಳು ಪತ್ತೆಯಾಗಿದ್ದು, ಆತಂಕ ಮೂಡಿಸಿದೆ. ಬೆಂಗಳೂರು (Bengaluru) ಸೇರಿದಂತೆ ರಾಜ್ಯದ 21 ಜಿಲ್ಲೆಗಳಲ್ಲಿ H3N2 ಸೋಂಕು ಪತ್ತೆಯಾಗಿದ್ದು, ರಾಜಧಾನಿಯೊಂದರಲ್ಲೇ 30 ಪ್ರಕರಣಗಳು ದಾಖಲಾಗಿವೆ.
ಯಾವ್ಯಾವ ಜಿಲ್ಲೆಗಳಲ್ಲಿ ಎಷ್ಟೆಷ್ಟು ಪ್ರಕರಣಗಳು
ಬೆಂಗಳೂರು/ ಬಿಬಿಎಂಪಿ ವ್ಯಾಪ್ತಿ-30, ಶಿವಮೊಗ್ಗ-19, ಧಾರವಾಡ-14, ಮೈಸೂರು-09, ವಿಜಯಪುರ-08, ಬೆಳಗಾವಿ-05, ಹಾಸನ-05, ತುಮಕೂರು-03, ದಾವಣಗೆರೆ-03, ಹಾವೇರಿ-03, ದಕ್ಷಿಣ ಕನ್ನಡ-03, ಬೆಂಗಳೂರು ಗ್ರಾಮಾಂತರ-02, ಗದಗ-02, ರಾಮನಗರ-02, ಚಾಮರಾಜನಗರ-01, ಬಾಗಲಕೋಟೆ-01, ಉತ್ತರ ಕನ್ನಡ-01, ಚಿತ್ರದುರ್ಗ-01, ಚಿಕ್ಕಮಗಳೂರು- 01, ಕೊಡಗು- 01, ಮಂಡ್ಯ-01 ಪ್ರಕರಣ ಪತ್ತೆಯಾಗಿದೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಕೋವಿಡ್ ಹೆಚ್ಚಳ, 500ರ ಗಡಿ ದಾಟಿದ ಸೋಂಕಿನ ಪ್ರಕರಣ, ಹೆಚ್ಚಿದ ಆತಂಕ
H3N2 ರೋಗಲಕ್ಷಣ ಮತ್ತು ಚಿಕಿತ್ಸೆ
ವೈದ್ಯರು ತಿಳಿಸಿರುವಂತೆ ಈ ವೈರಸ್ ಹೆಚ್ಚು ಅಪಾಯಕಾರಿಯಾಗಿದ್ದು, ಇದು ಸೋಂಕಿತ ಜನರೊಂದಿಗಿನ ಸಂಪರ್ಕದಿಂದ ಅತ್ಯಂತ ವೇಗವಾಗಿ ಹರಡುತ್ತದೆ. ಇದರಿಂದ ರಕ್ಷಣೆ ಪಡೆಯಲು ಕೋವಿಡ್ ಮಾದರಿಯ ಕ್ರಮಗಳನ್ನೇ ಅನುಸರಿಸಬೇಕು ಎಂದು ಸಲಹೆ ನೀಡುತ್ತಿದ್ದಾರೆ. ಈ ಕಾರಣಕ್ಕಾಗಿ ಕೈಗಳನ್ನು ತೊಳೆಯುವುದು, ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು, ಹೆಚ್ಚು ನೀರು ಕುಡಿಯುವುದು, ಜ್ವರಕ್ಕಾಗಿ ಪ್ಯಾರಾಸಿಟಮಾಲ್ ಮಾತ್ರೆ ತೆಗೆದುಕೊಳ್ಳುವುದು, ಹೀಗೆ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಬೇಕು ಎಂದು ಸಲಹೆ ನೀಡಿದ್ದಾರೆ.
H3N2 ವೈರಸ್ ರೋಗಲಕ್ಷಣಗಳು ಸುಮಾರು 1 ವಾರದವರೆಗೆ ಇರುತ್ತದೆ. ತಜ್ಞರ ಪ್ರಕಾರ ವೈರಸ್ ಕೆಮ್ಮು, ಸೀನು ಹಾಗೂ ಸೋಂಕಿತ ವ್ಯಕ್ತಿಯೊಂದಿಗೆ ನಿಕಟ ಸಂಪರ್ಕದಲ್ಲಿ ಇರುವುದರಿಂದ ಹರಡುತ್ತದೆ. ಹೀಗಾಗಿ ಜ್ವರ ಇರುವ ವ್ಯಕ್ತಿಯಿಂದ ಅಂತರ ಕಾಪಾಡಿಕೊಳ್ಳುವುದು ಸುರಕ್ಷಿತ ಎನ್ನಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ