ರಿಷಬ್ ಶೆಟ್ಟಿ ನಟನೆಯ ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪರಿಚಯಗೊಂಡ ನಟಿ ರಶ್ಮಿಕಾ, ತಾವು ಜೀವನದಲ್ಲಿ ಅತಿಯಾಗಿ ಗೌರವಿಸುವ ಏಕೈಕ ವ್ಯಕ್ತಿ ಯಾರೆಂಬುನ್ನು ಹೇಳಿಕೊಂಡಿದ್ದಾರೆ.
ರಶ್ಮಿಕಾ ಮಂದಣ್ಣ
ಸ್ಯಾಂಡಲ್ವುಡ್ ಮೂಲಕ ಚಿತ್ರರಂಗಕ್ಕೆ ಪರಿಚಯವಾದ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಬಹು ಕಡಿಮೆ ಸಮಯದಲ್ಲಿ ಪ್ಯಾನ್ ಇಂಡಿಯಾ (Pan India) ನಟಿಯಾಗಿ ಬದಲಾಗಿದ್ದಾರೆ. ಕನ್ನಡ ಚಿತ್ರರಂಗ (Sandalwood) ಹೊರತುಪಡಿಸಿ ಬೇರೆ ಚಿತ್ರರಂಗಗಳಲ್ಲಿ ಬಹಳ ಬ್ಯುಸಿಯಾಗಿರುವ ರಶ್ಮಿಕಾ, ಮಹಿಳಾ ದಿನಾಚರಣೆ ಅಂಗವಾಗಿ ಬಾಲಿವುಡ್ ಮ್ಯಾಗಜೀನ್ಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ತಾವು ಜೀವನದಲ್ಲಿ ಅತಿಯಾಗಿ ಪ್ರೀತಿಸುವ, ಗೌರವಿಸುವ ವ್ಯಕ್ತಿ ಯಾರೆಂಬುದನ್ನು ಹೇಳಿದ್ದಾರೆ.
ತಮ್ಮ ತಾಯಿ ಸುಮನ್ ಮಂದಣ್ಣ, ರಶ್ಮಿಕಾ ಅತಿಯಾಗಿ ಪ್ರೀತಿಸುವ ಹಾಗೂ ಗೌರವಿಸುವ ಏಕೈಕ ವ್ಯಕ್ತಿಯಂತೆ. ಹೀಗೆಂದು ಸ್ವತಃ ಅವರೇ ಹೇಳಿಕೊಂಡಿದ್ದಾರೆ. ನನ್ನ ತಾಯಿ ಬಗ್ಗೆ ನನಗೆ ಹೆಮ್ಮೆ ನಾನು ಅವರನ್ನು ನನ್ನ ಆದರ್ಶವಾಗಿ ಪರಿಗಣಿಸುತ್ತೇನೆ, ಅವರಂತಾಗಲು ಯತ್ನಿಸುತ್ತೇನೆ ಎಂದಿದ್ದಾರೆ.
ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ, ಮದನ್ ಮಂದಣ್ಣ ಹಾಗೂ ಸುಮನಾ ಮಂದಣ್ಣ ಅವರ ಮಗಳು. ರಶ್ಮಿಕಾಗೆ ಒಬ್ಬ ಸಹೋದರಿಯೂ ಇದ್ದಾರೆ. ರಶ್ಮಿಕಾ ತಂದೆ ಮದನ್ ಸ್ವತಃ ಉದ್ಯಮಿ. ಕೊಡಗಿನಲ್ಲಿ ಸಾಕಷ್ಟು ಜಮೀನು, ಮದುವೆ ಮಂಟಪಗಳನ್ನು ಹೊಂದಿದ್ದಾರೆ. ರಶ್ಮಿಕಾ ನಾಯಕಿಯಾದ ಮೇಲೆ ಮದನ್, ರಶ್ಮಿಕಾರ ಬ್ಯುಸಿನೆಸ್ ಪಾರ್ಟನರ್ ಸಹ ಆಗಿದ್ದಾರಂತೆ.
ಅದೇ ಸಂದರ್ಶನದಲ್ಲಿ ಮುಂದುವರೆದು ಮಾತನಾಡಿರುವ ರಶ್ಮಿಕಾ, ಒಂದು ಸಮಯವಿತ್ತು, ಸಾಮಾಜಿಕ ಜಾಲತಾಣದಲ್ಲಿ ನಡೆಯುವ ಟ್ರೋಲಿಂಗ್, ನಿಂದನೆಗಳು ನನ್ನ ಮೇಲೆ ಬಹಳ ಪರಿಣಾಮ ಬೀರುತ್ತಿದ್ದವು. ಆದರೆ ಈಗ ಹಾಗೆ ಆಗುವುದಿಲ್ಲ. ಎಷ್ಟೇ ನೆಗೆಟಿವಿಟಿ ನನ್ನ ಸುತ್ತ ಇದ್ದರೂ ನಾನು ಪಾಸಿಟಿವ್ ಆಗಿರಲು ಯತ್ನಿಸುತ್ತೇನೆ. ನನ್ನ ಕೆಲಸದ ಕಡೆಗೆ ಮಾತ್ರವೇ ಗಮನ ಹರಿಸುತ್ತೇನೆ. ಇಷ್ಟೆಲ್ಲ ನೆಗೆಟಿವಿಗಳ ನಡುವೆ ನನ್ನನ್ನು ಪ್ರೀತಿಸುವ, ಅಭಿಮಾನಿಸುವ ನನ್ನ ಅಭಿಮಾನಿಗಳಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ ಎಂದಿದ್ದಾರೆ.
ಬಾಲಿವುಡ್, ತೆಲುಗು ಹಾಗೂ ತಮಿಳು ಚಿತ್ರರಂಗಗಳಲ್ಲಿ ರಶ್ಮಿಕಾ ಇದೀಗ ಬ್ಯುಸಿಯಾಗಿದ್ದಾರೆ. ಇದೇ ಕಾರಣಕ್ಕೆ ಮುಂಬೈ-ಹೈದರಾಬಾದ್-ಚೆನ್ನೈಗಳ ನಡುವೆ ಸತತವಾಗಿ ಪ್ರಯಾಣಿಸುತ್ತಲೇ ಇರುತ್ತಾರೆ. ಈ ಬಗ್ಗೆಯೂ ಸಂದರ್ಶನದಲ್ಲಿ ಮಾತನಾಡಿರುವ ರಶ್ಮಿಕಾ ಮಂದಣ್ಣ, ವಾರಕ್ಕೆ ಹಲವು ಬಾರಿ ಮುಂಬೈ-ಹೈದರಾಬಾದ್-ಚೆನ್ನೈಗಳಿಗೆ ಓಡಾಡಬೇಕಾಗುತ್ತದೆ ನಿಜ. ಆದರೆ ಈ ಪ್ರಯಾಣ ನನಗೆ ಸುಸ್ತು ಎನಿಸುವುದಿಲ್ಲ. ಏಕೆಂದರೆ ನಾನು ಮೊದಲೇ ತಯಾರಾಗಿರುತ್ತೀನಿ, ನನ್ನ ಪ್ರಯಾಣವನ್ನೂ ಸರಿಯಾಗಿ ಯೋಜಿಸಿ ಪ್ಲ್ಯಾನ್ ಮಾಡಿರುತ್ತೇನೆ. ಹರಿ-ಬರಿ ಮಾಡುವುದಿಲ್ಲ ಹಾಗಾಗಿ ಪ್ರಯಾಣಗಳು ನನಗೆ ಕಷ್ಟ ಎನಿಸುವುದಿಲ್ಲ ಎಂದಿದ್ದಾರೆ ರಶ್ಮಿಕಾ.
ನಟಿ ರಶ್ಮಿಕಾ ಇದೀಗ ಬಾಲಿವುಡ್ನಲ್ಲಿ ಸ್ಟಾರ್ ನಟ ರಣಬೀರ್ ಕಪೂರ್ ಜೊತೆಗೆ ಅನಿಮಲ್ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅದರ ಜೊತೆಗೆ ಟೈಗರ್ ಶ್ರಾಫ್ ನಟನೆಯ ಸಿನಿಮಾದಲ್ಲಿಯೂ ನಟಿಸಲಿಕ್ಕಿದ್ದಾರೆ. ತೆಲುಗಿನಲ್ಲಿ ಪುಷ್ಪ 2 ಸಿನಿಮಾದಲ್ಲಿ ನಟಿಸಲಿದ್ದಾರೆ. ಗೀತ ಗೋವಿಂದಂ 2 ಸೆಟ್ಟೇರಲಿದ್ದು ಆ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಜೊತೆಗೆ ರಶ್ಮಿಕಾ ನಟಿಸುವ ಸಾಧ್ಯತೆ ಇದೆ. ತಮಿಳಿನ ಒಂದು ಸಿನಿಮಾಕ್ಕೂ ರಶ್ಮಿಕಾ ಸೈ ಎಂದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ