ಅಕ್ಷಯ್ ಕುಮಾರ್, ಇಮ್ರಾನ್ ಹಶ್ಮಿ ನಟನೆಯ ಸೆಲ್ಫಿ ಸಿನಿಮಾ ಫೆಬ್ರವರಿ 24 ರಂದು ಬಿಡುಗಡೆ ಆಗಿದ್ದು, ಸಿನಿಮಾ ನೋಡಿದ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಸೆಲ್ಫಿ ಸಿನಿಮಾ ಪೋಸ್ಟರ್
ಅಕ್ಷಯ್ ಕುಮಾರ್ (Akshay Kumar), ಇಮ್ರಾನ್ ಹಶ್ಮಿ (Emraan Hashmi) ಒಟ್ಟಿಗೆ ನಟಿಸಿರುವ ಹಿಂದಿ ಸಿನಿಮಾ ಸೆಲ್ಫಿ (Selfiee Movie) ಇಂದಷ್ಟೆ (ಫೆಬ್ರವರಿ 24) ಬಿಡುಗಡೆ ಆಗಿದೆ. ಮಲಯಾಳಂನ ಡ್ರೈವಿಂಗ್ ಲೈಸೆನ್ಸ್ ಸಿನಿಮಾದ ರೀಮೇಕ್ ಆಗಿರುವ ಈ ಸಿನಿಮಾದ ಬಗ್ಗೆ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಸಿನಿಮಾ ನೋಡಿದ ಹಲವರು ಟ್ವಿಟ್ಟರ್ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು ಆಯ್ದ ಕೆಲವು ಅಭಿಪ್ರಾಯಗಳು ಇಲ್ಲಿವೆ.
ಭಿನ್ನವಾದ ಕತೆ ಹೊಂದಿರುವ ಸೆಲ್ಫಿ ಸಿನಿಮಾ ಹಾಸ್ಯ, ಭಾವುಕತೆ, ಕತೆಯಲ್ಲಿ ತಿರುವುಗಳು ಹೊಂದಿರುವ ಪರಿಪೂರ್ಣ ಎಂಟರ್ಟೈನ್ಮೆಂಟ್ ಪ್ಯಾಕೇಜ್ ಆಗಿದೆ. ಇಮ್ರಾನ್ ಹಶ್ಮಿ ಅದ್ಭುತವಾಗಿ ನಟಿಸಿದ್ದಾರೆ. ಇನ್ನು ಅಕ್ಷಯ್ ಕುಮಾರ್ ತಮ್ಮ ಹಾಸ್ಯ, ಭಿನ್ನ ಮ್ಯಾನರಿಸಂಗಳಿಂದ ಗಮನ ಸೆಳೆದಿದ್ದಾರೆ ಎಂದು ಟ್ವಿಟ್ಟರ್ನಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ ಅಭಯ್ ಶುಕ್ಲ ಹೆಸರಿನ ನೆಟ್ಟಿಗ.
ಈಗಷ್ಟೆ ಸೆಲ್ಫಿ ಸಿನಿಮಾ ನೋಡಿದೆ. ಬಾಲಿವುಡ್ ಇತ್ತೀಚೆಗೆ ನಿರ್ಮಿಸಿದ ಅತಿ ಕೆಟ್ಟ ಸಿನಿಮಾಗಳಲ್ಲಿ ಇದು ಒಂದು. ಅಕ್ಷಯ್ ಕುಮಾರ್ ಪ್ರದರ್ಶನ ಸಹ ಸೂಕ್ತವಾಗಿಲ್ಲ. ಇಮ್ರಾನ್ ಹಶ್ನಿ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಸಿನಿಮಾದ ಒಳ್ಳೆಯ ಅಂಶವೆಂದರೆ ಮೃಣಾಲ್ ಠಾಕೂರ್ಳ ಹಾಡು ಮಾತ್ರವೇ ಅದನ್ನು ಯೂಟ್ಯೂಬ್ನಲ್ಲಿ ಸಹ ನೋಡಬಹುದು. ದಯವಿಟ್ಟು ನಿಮ್ಮ ಹಣ ವ್ಯರ್ಥ ಮಾಡಿಕೊಳ್ಳಬೇಡಿ ಎಂದು ಕಟು ವಾಕ್ಯಗಳಲ್ಲಿ ಸತೀಶ್ ಶ್ರೀಕನ್ ಎಂಬುವರು ಸಿನಿಮಾ ಬಗ್ಗೆ ಟ್ವೀಟ್ ಮಾಡಿದ್ದಾರೆ.
ಸೆಲ್ಫಿ ಒಂದು ಪಕ್ಕಾ ಮನರಂಜನಾತ್ಮಕ ಸಿನಿಮಾ. ತಮ್ಮ ಪಾತ್ರದಲ್ಲಿ ಅಕ್ಷಯ್ ಕುಮಾರ್ ಬಹಳ ಕಂಫರ್ಟೆಬಲ್ ಆಗಿ ನಟಿಸಿದ್ದಾರೆ. ಕೆಲವೊಂದು ದೃಶ್ಯಗಳಲ್ಲಿಯಂತೂ ಅವರ ಪಾತ್ರದಲ್ಲಿ ಅವರೇ ನಟಿಸುತ್ತಿದ್ದಾರೇನೋ ಎನಿಸುತ್ತದೆ. ಇಮ್ರಾನ್ ಹಶ್ಮಿ ಅವರ ಭಾವುಕ ನಟನೆ ಗಮನ ಸೆಳೆಯುತ್ತದೆ. ಗುಡ್ ನ್ಯೂಸ್, ಜುಗ್ ಜುಗ್ ಜಿಯೋ ಸಿನಿಮಾಗಳ ಬಳಿಕ ರಾಜ್ ಮೆಹ್ತಾ ಮತ್ತೊಮ್ಮೆ ತಮ್ಮ ಕಾಮಿಡಿ ಡ್ರಾಮಾ ಸಿನಿಮಾದಿಂದ ಗಮನ ಸೆಳೆದಿದ್ದಾರೆ ಎಂದಿದ್ದಾರೆ ನೀತಿ ರಾಯ್.
ಅಕ್ಷಯ್ ಕುಮಾರ್ ಫ್ಯಾನ್ ಎಂದು ಹೇಳಿಕೊಳ್ಳುವ ನೆಟ್ಟಿಗನೊಬ್ಬ, ಮುಂಬೈನ ಜುಹುವಿನ ಡೈನಮಿಕ್ ಪಿವಿಆರ್ನಲ್ಲಿ ಸೆಲ್ಫಿ ಸಿನಿಮಾ ನೋಡಿದೆ. ಸಿನಿಮಾದ ಮೊದಲಾರ್ಧ ಸಾಧಾರಣ ಎನಿಸಿತು. ದ್ವಿತೀಯಾರ್ಧವಂತೂ ತೀರ ಕಳಪೆ ಎನಿಸಿತು. ಅಕ್ಷಯ್ ಕುಮಾರ್ ಅಂಥಹಾ ನಟರಿಂದ ಇಂಥಹ ಸಿನಿಮಾವನ್ನು ನಿರೀಕ್ಷೆ ಮಾಡಿರಲಿಲ್ಲ ಎಂದು ಟ್ವೀಟ್ ಮಾಡಿದ್ದಾನೆ.
ಒಂದೇ ಪದದಲ್ಲಿ ಸಿನಿಮಾದ ಬಗ್ಗೆ ಹೇಳುವುದಾದರೆ ಇದೊಂದು ಅತ್ಯಂತ ಕೆಟ್ಟ ಸಿನಿಮಾ ಎಂದು ಮತ್ತೊಬ್ಬ ನೆಟ್ಟಿಗ ಟ್ವೀಟ್ ಮಾಡಿದ್ದಾನೆ. ಮೂಲ ಸಿನಿಮಾದೊಂದಿಗೆ ಹೋಲಿಸಿ ವಿಮರ್ಶೆ ಮಾಡಿರುವ ಈತ, ಸುಕುಮಾರನ್ ನಟನೆಯ ಹತ್ತಿರಕ್ಕೂ ಸಹ ಅಕ್ಷಯ್ಗೆ ಬರಲಾಗಿಲ್ಲ. ಸಿನಿಮಾವನ್ನು ಯಥಾವತ್ತು ನಕಲು ಮಾಡಬಹುದು ಆದರೆ ನಿಜವಾದ ಟ್ಯಾಲೆಂಟ್ ಅನ್ನು ನಕಲು ಮಾಡಲು ಸಾಧ್ಯವಿಲ್ಲ. ಈ ಸಿನಿಮಾ ಕೆಲವರಿಗೆ ಹಿಡಿಸಬಹುದೇನೋ ಆದರೆ ನನಗೆ ಸಿನಿಮಾ ಫ್ರೆಶ್ ಎನಿಸಲಿಲ್ಲ ಎಂದಿದ್ದಾರೆ.
ಅಕ್ಷಯ್ ಕುಮಾರ್ ಸತತ ಸೋಲಿನಿಂದ ಕಂಗೆಟ್ಟಿದ್ದು, ಈ ಸಿನಿಮಾ ಆದರೂ ಸೋಲಿನ ಸುಳಿಯಿಂದ ಕಾಪಾಡುವ ನಿರೀಕ್ಷೆ ಇತ್ತು. ಆದರೆ ಸಿನಿಮಾದ ಮೊದಲ ದಿನದ ಓಪನಿಂಗ್ ಹಾಗೂ ಟ್ವಿಟ್ಟರ್ ವಿಮರ್ಶೆಗಳನ್ನು ಗಮನಿಸಿದರೆ ಈ ಸಿನಿಮಾ ಸಹ ಕೈಕೊಡುವ ಸಾಧ್ಯತೆ ದಟ್ಟವಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ