ನಾಯಕಿಯಾಗಿ ನಟಿಸಿದ್ದ ನಟಿಯನ್ನು ಟ್ವಿಟ್ಟರ್ನಲ್ಲಿ ಬ್ಲಾಕ್ ಮಾಡಿದ ಅಲ್ಲು ಅರ್ಜುನ್, ಸ್ಕ್ರೀನ್ ಶಾಟ್ ಹಂಚಿಕೊಂಡು ನಕ್ಕ ನಟಿ.
ಅಲ್ಲು ಅರ್ಜುನ್-ಭಾನುಶ್ರೀ
ಗೆಲುವಿಗೆ ನೆಂಟರು ಹೆಚ್ಚು, ಸೋಲು ಅನಾಥ. ಚಿತ್ರರಂಗಕ್ಕೆ ಈ ಗಾದೆ ಚೆನ್ನಾಗಿ ಸೂಟ್ ಆಗುತ್ತದೆ. ಸಿನಿಮಾ ಗೆದ್ದಾಗ ಅದರ ಕ್ರೆಡಿಟ್ ತೆಗೆದುಕೊಳ್ಳಲು ಹಲವರು ಬರುತ್ತಾರೆ, ಸೋತರೆ ಒಬ್ಬರು ಮತ್ತೊಬ್ಬರ ಕಡೆ ಬೊಟ್ಟು ಮಾಡುತ್ತಾರೆ. ಸಿನಿಮಾ ನಟ-ನಟಿಯರಿಗೂ ಈ ಮಾತು ಚೆನ್ನಾಗಿಯೇ ಒಪ್ಪುತ್ತದೆ. ಸಿನಿಮಾಗಳು ಗೆದ್ದಾಗ, ವೃತ್ತಿ ಬದುಕಿನಲ್ಲಿ ಉನ್ನತಿಯಲ್ಲಿದ್ದಾಗ ಎಲ್ಲರೂ ಗೌರವದಿಂದ ಪ್ರೀತಿಯಿಂದ ಕಾಣುತ್ತಾರೆ, ಆದರೆ ಅವಕಾಶಗಳು ಕಡಿಮೆಯಾಗುತ್ತಲೆ ಎಲ್ಲರೂ ದೂರ ತಳ್ಳುತ್ತಾರೆ. ನಟಿ ಭಾನುಶ್ರೀಗೆ (Bhanu Sri Mehra) ಇದು ಚೆನ್ನಾಗಿ ಅನುಭವ ಆಗಿದೆ. ಸ್ವತಃ ಆಕೆಯೊಟ್ಟಿಗೆ ನಾಯಕನಾಗಿ ನಟಿಸಿದ್ದ ಅಲ್ಲು ಅರ್ಜುನ್ (Allu Arjun) ಅವರನ್ನು ಬ್ಲಾಕ್ ಮಾಡಿಬಿಟ್ಟಿದ್ದಾರೆ.
ನಟಿ ಭಾನು ಶ್ರೀ ತಮ್ಮ ಮೊದಲ ಸಿನಿಮಾದಲ್ಲಿಯೇ ಅಲ್ಲು ಅರ್ಜುನ್ಗೆ ನಾಯಕಿಯಾಗಿದ್ದರು. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ನಟಿ ಭಾನು, ನಿನ್ನೆಯಷ್ಟೆ (ಮಾರ್ಚ್ 18) ಸ್ಕ್ರೀನ್ ಶಾಟ್ ಒಂದನ್ನು ಹಂಚಿಕೊಂಡು, ಅಲ್ಲು ಅರ್ಜುನ್ ನನ್ನನ್ನು ಬ್ಲಾಕ್ ಮಾಡಿದ್ದಾರೆ ಎಂದಿದ್ದರು. ಇದು ಚರ್ಚೆಗೆ ಕಾರಣವಾಗಿತ್ತು.
ಅಲ್ಲು ಅರ್ಜುನ್ ತಮ್ಮನ್ನು ಬ್ಲಾಕ್ ಮಾಡಿರುವ ಸ್ಕ್ರೀನ್ ಶಾಟ್ ಹಂಚಿಕೊಂಡಿದ್ದ ನಟಿ, ”ನೀವು ಯಾವಾಗಲಾದರೂ ಹಳಿಯಲ್ಲಿ ಸಿಲುಕಿಕೊಂಡಿದ್ದೀರಿ ಎಂದು ಅನಿಸಿದರೆ, ನೆನಪಿಸಿಕೊಳ್ಳಿ, ನಾನು ಅಲ್ಲು ಅರ್ಜುನ್ ಜೊತೆ ‘ವರುಡು’ ಚಿತ್ರದಲ್ಲಿ ನಟಿಸಿದ್ದೇನೆ ಆದರೂ ಸಹ ಈಗ ಯಾವುದೇ ಆಫರ್ಗಳು ನನಗೆ ಸಿಗುತ್ತಿಲ್ಲ. ಆದರೆ ನನ್ನ ಈ ಸ್ಟ್ರಗಲ್ ಗಳಲ್ಲಿಯೂ ಹಾಸ್ಯವನ್ನು ಹುಡುಕಲು ನಾನು ಕಲಿತಿದ್ದೇನೆ. ಅದರಲ್ಲಿಯೂ ಈಗ ಅಲ್ಲು ಅರ್ಜುನ್ ನನ್ನನ್ನು ಟ್ವಿಟರ್‌ನಲ್ಲಿ ಬ್ಲಾಕ್ ಮಾಡಿದ್ದಾರೆ ಎಂಬುದು ನೋಡಿದಾಗ ನನಗೆ ಬೇಸರದ ಬದಲು ನಗು ಬರುತ್ತಿದೆ” ಎಂದಿದ್ದರು.
ನಟಿಯ ಟ್ವೀಟ್ ನೋಡಿದ ಹಲವರು, ಸ್ಟಾರ್ ಆಗಿರುವ ಅಲ್ಲು ಅರ್ಜುನ್ ಸಣ್ಣ ನಟರ ಬಗ್ಗೆ ಗೌರವ ಕಳೆದುಕೊಂಡಿದ್ದಾರೆ ಎಂದು ಕಮೆಂಟ್ ಮಾಡಿದ್ದರು. ಇನ್ನು ಅಲ್ಲು ಅರ್ಜುನ್ ಅಭಿಮಾನಿಗಳು, ಭಾನುಶ್ರೀ, ತಮ್ಮ ಕೆರಿಯರ್ನಲ್ಲಿ ಹಿನ್ನಡೆ ಅನುಭವಿಸಿದ್ದಕ್ಕೆ ಅಲ್ಲು ಅರ್ಜುನ್ ಅನ್ನು ಹೊಣೆ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ದೂರಿದ್ದರು.
ಆದರೆ ಅದೇ ದಿನ ಮತ್ತೊಂದು ಟ್ವೀಟ್ ಮಾಡಿರುವ ಭಾನುಶ್ರೀ, ”ಒಳ್ಳೆಯ ಸುದ್ದಿ, ಅಲ್ಲು ಅರ್ಜುನ್ ನನ್ನನ್ನು ಟ್ವಿಟ್ಟರ್ನಲ್ಲಿ ಅನ್‌ಬ್ಲಾಕ್ ಮಾಡಿದ್ದಾರೆ. ನಾನು ಒಂದು ವಿಷಯ ಸ್ಪಷ್ಟಪಡಿಸುತ್ತೇನೆ. ವೃತ್ತಿಜೀವನದಲ್ಲಿ ನಾನು ಅನುಭವಿಸಿದ ಹಿನ್ನಡೆಗಳಿಗೆ ಅಲ್ಲು ಅರ್ಜುನ್ ಅವರನ್ನು ಎಂದಿಗೂ ದೂಷಿಸಿಲ್ಲ. ಬದಲಾಗಿ, ಕೆಲಸ ಪಡೆಯಲು ನಾನು ಮಾಡುತ್ತಿರುವ ಹೋರಾಟಗಳಲ್ಲಿ ಹಾಸ್ಯವನ್ನು ಕಂಡುಕೊಳ್ಳಲು ಮತ್ತು ಮುಂದೆ ಸಾಗಲು ನಾನು ಕಲಿತಿದ್ದೇನೆ. ಹೆಚ್ಚಿನ ನಗು ಮತ್ತು ಉತ್ತಮ ವೈಬ್‌ಗಳಿಗಾಗಿ ಟ್ಯೂನ್ ಮಾಡಿ! ನನ್ನ ಹಿಂದಿನ ಟ್ವೀಟ್ ಅನ್ನು ವೈಯಕ್ತಿಕವಾಗಿ ತೆಗೆದುಕೊಳ್ಳದೆ ಕ್ರೀಡಾಸ್ಪೂರ್ತಿಯೊಂದಿಗೆ ತೆಗೆದುಕೊಂಡಿದ್ದಕ್ಕೆ ಧನ್ಯವಾದಗಳು ಅಲ್ಲು ಅರ್ಜುನ್” ಎಂದಿದ್ದಾರೆ. ಜೊತೆಗೆ ಅಲ್ಲು ಅರ್ಜುನ್ ತಮ್ಮನ್ನು ಅನ್‌ಬ್ಲಾಕ್ ಮಾಡಿರುವ ಸ್ಕ್ರೀನ್ಶಾಟ್ ಅನ್ನು ಸಹ ಹಂಚಿಕೊಂಡಿದ್ದಾರೆ.
2010 ರಲ್ಲಿ ಬಿಡುಗಡೆ ಆಗಿದ್ದ ಅಲ್ಲು ಅರ್ಜುನ್ ನಟನೆಯ ವರುಡು ಸಿನಿಮಾ ಅಟ್ಟರ್ ಫ್ಲಾಪ್ ಆಗಿತ್ತು ಆ ಸಿನಿಮಾದಲ್ಲಿ ಅಲ್ಲು ಅರ್ಜುನ್ ಜೊತೆ ನಾಯಕಿಯಾಗಿ ಭಾನು ಶ್ರೀ ಮೆಹ್ರಾ ನಟಿಸಿದ್ದರು. ಇದು ಅವರ ಮೊದಲ ಸಿನಿಮಾ ಆಗಿತ್ತು. ಚಿತ್ರತಂಡವೂ ಸಹ ಸಿನಿಮಾ ಬಿಡುಗಡೆ ಆಗುವವರೆಗೆ ಸಿನಿಮಾದ ನಾಯಕಿ ಯಾರೆಂಬುದನ್ನು ಗೌಪ್ಯವಾಗಿಟ್ಟಿತ್ತು. ಸಿನಿಮಾದಲ್ಲಿ ಸಹ ನಾಯಕಿಯ ಎಂಟ್ರಿಯನ್ನು ಸಖತ್ ಗ್ರ್ಯಾಂಡ್ ಆಗಿ ಚಿತ್ರೀಕರಿ ತೋರಿಸಲಾಗಿತ್ತು. ಆದರೆ ದುರಾದೃಷ್ಟವಶಾತ್ ಆ ಸಿನಿಮಾ ಅಟ್ಟರ್ ಪ್ಲಾಪ್ ಆಯಿತು. ಭಾನು ಶ್ರೀ ವೃತ್ತಿ ಜೀವನ ಸಹ ಇಳಿಮುಖವಾಗುತ್ತಲೇ ಸಾಗಿತು.
ಈಗಲೂ ಭಾನುಶ್ರೀ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರಾದರೂ ನಿರೀಕ್ಷಿತ ಅವಕಾಶಗಳು ಅವರಿಗೆ ಸಿಗುತ್ತಿಲ್ಲ. ನಾಯಕಿಯ ಪಾತ್ರದಲ್ಲಿ ಭಾನುಶ್ರೀ ನಟಿಸಿ ಬಹಳ ಸಮಯವಾಗಿದೆ. ಭಾನುಶ್ರೀ, ಕನ್ನಡದ ಡೀಲ್ ರಾಜ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಕೋಮಲ್ ನಾಯಕ.
ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ