ಅದು ಹಲವು ದಶಕ ವರ್ಷಗಳ ಇತಿಹಾಸ ಇರೋ ಶಾಲೆ. ಆ ಸರ್ಕಾರಿ ಶಾಲೆಯಲ್ಲಿ ಸ್ಲಂ ಪ್ರದೇಶದ ಮಕ್ಕಳೇ ಹೆಚ್ಚಾಗಿ ಓದುತ್ತಾರೆ. ಆದ್ರೆ ಆ ಶಾಲಾ ಕಟ್ಟಡದ ವಿಚಾರ ಇದೀಗ ರಾಜಕೀಯ ನಾಯಕರ ಕಿತ್ತಾಟಕ್ಕೆ ಕಾರಣವಾಗಿದೆ. ಸಚಿವರು ಆ ಜಾಗದಲ್ಲೆ ಶಾಲೆ ಕಟ್ಟತೇನಿ ಅಂತಿದ್ರೆ.. ಅದೆಂಗೆ ಕಟ್ಟತೀರಾ ಅಂತಾ ಮಾಜಿ ಸಚಿವರೊಬ್ಬರು ಸಚಿವರಿಗೆ ಸವಾಲೆಸೆದು ಕಾಮಗಾರಿ ಸ್ಥಗಿತಗೊಳಿಸಿದ್ದಾರೆ.
ಬಳ್ಳಾರಿ ಸರ್ಕಾರಿ ಶಾಲಾ ಕಟ್ಟಡ ನಿರ್ಮಾಣದಲ್ಲಿ ರಾಜಕೀಯ ನಾಯಕರ ಕಿತ್ತಾಟ
ಬಳ್ಳಾರಿ: ನಗರದ ಶ್ರೀರಾಂಪುರ ಕಾಲೋನಿಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗೆ ಹಲವು ದಶಕಗಳ ಇತಿಹಾಸವಿದೆ. ಈ ಶಾಲೆಯ ಪ್ರಾಥಮಿಕ ವಿಭಾಗದಲ್ಲಿ 373 ಹಾಗೂ ಪ್ರೌಢ ಶಾಲೆಯಲ್ಲಿ 134 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಹೀಗಾಗಿ ಈ ಶಾಲೆಯ ಶಿಥಿಲಗೊಂಡ ಕಟ್ಟಡವನ್ನ ಸರ್ಕಾರ ಇದೀಗ ಹೊಸದಾಗಿ ನಿರ್ಮಿಸಲು ಹೊರಟಿದೆ. ಆದ್ರೆ ಇದೇ ವಿಚಾರ ಇದೀಗ ರಾಜಕೀಯ ನಾಯಕರ ಮಧ್ಯೆ ಕಿತ್ತಾಟಕ್ಕೆ ಕಾರಣವಾಗಿದೆ. ಸ್ಲಂ ಪ್ರದೇಶದ ಮಕ್ಕಳಿಗೆ ಆಟವಾಡಲು ಇರುವ ಏಕೈಕ ಮೈದಾನದಲ್ಲಿ ಶಾಲೆ ನಿರ್ಮಾಣ ಬೇಡ ಎಂದು ಮಾಜಿ ಸಚಿವ ದಿವಾಕರಬಾಬು ಬಾಬು ತಕರಾರು ತೆಗೆದಿದ್ದಾರೆ. ಸ್ಥಳೀಯರ ಜೊತೆಗೂಡಿ ಕಾಮಗಾರಿಗೆ ತಡೆಯೊಡ್ಡಿ ಕಾಮಗಾರಿ ಸ್ಥಗಿತಗೊಳಿಸಿ ಎಂದು ಹೋರಾಟಕ್ಕೆ ಇಳಿದಿದ್ದಾರೆ.
ಹಳೇ ಕಟ್ಟಡ ಶಿಥಿಲಗೊಂಡಿದ್ದರೇ ಆ ಕಟ್ಟಡ ಕೆಡವಿ ಅದೇ ಸ್ಥಳದಲ್ಲಿ ಮರಳಿ ಶಾಲೆ ನಿರ್ಮಿಸಿ. ಅದು ಬಿಟ್ಟು ಮೈದಾನದಲ್ಲಿ ಶಾಲಾ ನಿರ್ಮಾಣ ಬೇಡವೆಂದು ಮಾಜಿ ಸಚಿವ ದಿವಾಕರಬಾಬು ಪಟ್ಟು ಹಿಡಿದಿದ್ದಾರೆ. ಆದ್ರೆ ಶಾಲಾ ಕಟ್ಟಡದ ಕಾಮಗಾರಿಗೆ ಕಳೆದ ತಿಂಗಳೇ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದ್ದಾರೆ. ಹೀಗಾಗಿ ಕಾಮಗಾರಿ ನಡೆಯುವ ವೇಳೆ ಮಾಜಿ ಸಚಿವರು. ಹಾಲಿ ಸಚಿವರ ಮಧ್ಯೆ ರಾಜಕೀಯ ಶುರುವಾಗಿದೆ. ಕನ್ನಡ, ತೆಲುಗು, ಇಂಗ್ಲಿಷ್ ಮೀಡಿಯಂ ವಿಭಾಗದಲ್ಲಿ 507 ವಿದ್ಯಾರ್ಥಿಗಳು ವಿಧ್ಯಾಭ್ಯಾಸ ಮಾಡೋ ಈ ಶಾಲೆಗೆ 2 ಕೋಟಿಗೂ ಅಧಿಕ ವೆಚ್ಚದಲ್ಲಿ ಹೊಸ ಕಟ್ಟಡ ನಿರ್ಮಾಣ ಮಾಡುವ ವೇಳೆಯೇ ರಾಜಕೀಯ ಶುರುವಾಗಿದೆ. ಈ ಕುರಿತು ಉಸ್ತುವಾರಿ ಸಚಿವ ಶ್ರೀರಾಮುಲುರನ್ನ ಕೇಳಿದ್ರೆ. ಚುನಾವಣೆ ಹತ್ತಿರ ಬಂದಾಗ ರಾಜಕೀಯ ಮಾಡೋದು ಬೇಡ. ರಾಜಕೀಯದಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಆಗುತ್ತದೆ. ಹೀಗಾಗಿ ಶಾಲೆ ನಿರ್ಮಾಣ ಮಾಡಿಯೇ ಸಿದ್ದ ಅಂತಾ ಶ್ರೀರಾಮುಲು ಹೇಳ್ತಿದ್ದಾರೆ.
ಒಬ್ಬರು ಹಳೆಯ ಕಟ್ಟಡ ಇರುವ ಸ್ಥಳದಲ್ಲೇ ದುರಸ್ಥಿ ಮಾಡಿ ಅಲ್ಲೇ ಕಟ್ಟಡ ಕಟ್ಟಿ ಅಂತಿದ್ದಾರೆ. ಇನ್ನೊಂದೆಡೆ ಸಚಿವರು ಮಾತ್ರ ಹೊಸ ಜಾಗದಲ್ಲಿಯೇ ಶಾಲೆ ಕಟ್ಟೋದಾಗಿ ಹೇಳ್ತಿದ್ದಾರೆ. ಮಾಜಿ – ಹಾಲಿ ಸಚಿವರ ರಾಜಕೀಯದಿಂದ ಸಧ್ಯಕ್ಕೆ ಕಾಮಗಾರಿ ಸ್ಥಗಿತಗೊಂಡಿದೆ. ಈ ಶಾಲಾ ಕಟ್ಟಡದ ರಾಜಕೀಯ ಅದ್ಯಾವ ಹಂತಕ್ಕೆ ಹೋಗಿ ತಲುಪುತ್ತೋ ಅನ್ನೋದನ್ನ ಕಾದು ನೋಡಬೇಕಿದೆ.
ವರದಿ: ವಿರೇಶ್ ದಾನಿ ಟಿವಿ9 ಬಳ್ಳಾರಿ
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ತಾಜಾ ಸುದ್ದಿ