Chetan Sharma – Virat Kohli: ಭಾರತ ಏಕದಿನ ನಾಯಕತ್ವದಿಂದ ವಜಾಗೊಳಿಸುವ ಮುನ್ನ ತಮ್ಮ ನಿರ್ಧಾರವನ್ನು ವಿರಾಟ್ ಕೊಹ್ಲಿಗೆ ತಿಳಿಸಲಾಗಿದೆ ಎಂದು ಅಂದು ಬಿಸಿಸಿಐ ಅಧ್ಯಕ್ಷರಾಗಿದ್ದ ಸೌರವ್ ಗಂಗೂಲಿ ತಿಳಿಸಿದ್ದರು.
ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥ ಚೇತನ್ ಶರ್ಮಾ (Chetan Sharma) ನೀಡಿರುವ ಹೇಳಿಕೆಗಳು ಇದೀಗ ಹೊಸ ಚರ್ಚೆಗೆ ಕಾರಣವಾಗಿದೆ. ಖಾಸಗಿ ಚಾನೆಲ್ವೊಂದು ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ಚೇತನ್ ಶರ್ಮಾ ಹಲವು ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ. ಇದರಲ್ಲಿ ವಿರಾಟ್ ಕೊಹ್ಲಿ ಹಾಗೂ ಸೌರವ್ ಗಂಗೂಲಿ ನಡುವಣ ವಾಕ್ಸಮರದ ವಿಚಾರ ಕೂಡ ಬಂದು ಹೋಗಿದೆ. ಭಾರತ ಏಕದಿನ ನಾಯಕತ್ವದಿಂದ ವಜಾಗೊಳಿಸುವ ಮುನ್ನ ತಮ್ಮ ನಿರ್ಧಾರವನ್ನು ವಿರಾಟ್ ಕೊಹ್ಲಿಗೆ ತಿಳಿಸಲಾಗಿದೆ ಎಂದು ಅಂದು ಬಿಸಿಸಿಐ ಅಧ್ಯಕ್ಷರಾಗಿದ್ದ ಸೌರವ್ ಗಂಗೂಲಿ ತಿಳಿಸಿದ್ದರು. ಆದರೆ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿರಾಟ್ ಕೊಹ್ಲಿ ತಂಡದ ನಾಯಕತ್ವದಿಂದ ತೆಗೆದುಹಾಕುವ ಬಗ್ಗೆ ಮುಂಚಿತವಾಗಿ ತಿಳಿಸದೆ ಬಿಸಿಸಿಐ ಸುಳ್ಳು ಹೇಳಿದೆ ಎಂದು ಆರೋಪಿಸಿದ್ದರು.
ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿಗೆ ತಂಡವನ್ನು ಆಯ್ಕೆ ಮಾಡುವ ಒಂದೂವರೆ ಗಂಟೆಗಳ ಮೊದಲು ಚೇತನ್ ಶರ್ಮಾ ಅವರು ದೂರವಾಣಿ ಮೂಲಕ ಈ ಕ್ರಮದ ಬಗ್ಗೆ ತಿಳಿಸಿದ್ದರು ಎಂದು ಕೊಹ್ಲಿ ಹೇಳಿದ್ದರು.
ಇದೀಗ ಖಾಸಗಿ ಚಾನೆಲ್ ನಡೆಸಿದ ಸ್ಟಿಂಪ್ ಆಪರೇಷನ್ನಲ್ಲಿ ಈ ವಿವಾದಾತ್ಮಕ ಪತ್ರಿಕಾಗೋಷ್ಟಿ ಬಗ್ಗೆ ಚೇತನ್ ಶರ್ಮಾ ಪ್ರಸ್ತಾಪಿಸಿದ್ದಾರೆ. ಅಲ್ಲದೆ ಅಂದು ಸುದ್ದಿಗೋಷ್ಠಿಯಲ್ಲಿ ವಿರಾಟ್ ಕೊಹ್ಲಿ ಬಿಸಿಸಿಐ ಹಾಗೂ ಸೌರವ್ ಗಂಗೂಲಿ ಬಗ್ಗೆ ಸುಳ್ಳು ಹೇಳಿದ್ದರು ಎಂದು ತಿಳಿಸಿದ್ದಾರೆ.
ಅಂದು ವೀಡಿಯೋ ಕಾನ್ಫರೆನ್ಸ್‌ನಲ್ಲಿ ಸೌರವ್ ಗಂಗೂಲಿ ಸ್ಪಷ್ಟವಾಗಿ ಹೇಳಿದ್ದರು. ಆದರೆ ಅದು ವಿರಾಟ್ ಕೊಹ್ಲಿಗೆ ಕೇಳಿಸಿಲ್ಲ ಅಂದರೆ ಹೇಗೆ, ಏಕೆಂದರೆ ಅಲ್ಲಿ ಒಬ್ಬರಲ್ಲ ಒಂಬತ್ತು ಜನರು ಕುಳಿತಿದ್ದರು. ಎಲ್ಲಾ ಜನರು ಅಲ್ಲಿದ್ದರು. ನಾನು ಕೂಡ ಅಲ್ಲಿದ್ದೆ. ಎಲ್ಲಾ ಆಯ್ಕೆದಾರರು ಮತ್ತು ಮಂಡಳಿಯ ಸದಸ್ಯರು ಅಲ್ಲಿದ್ದರು. ಒಂದೋ ವಿರಾಟ್ ಕೇಳಿಸಿರಲ್ಲ. ಅಥವಾ ಕೊಹ್ಲಿ ಕೇಳುವ ಗೋಜಿಗೆ ಹೋಗಿರಲ್ಲ. ಅದರ ಬಗ್ಗೆ ನಮಗೆ ಗೊತ್ತಿಲ್ಲ.
ಆದರೆ ವಿರಾಟ್ ಕೊಹ್ಲಿ ಸೌತ್ ಆಫ್ರಿಕಾ ಸರಣಿಗೆ ತೆರಳುವ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಯಾಕೆ ಹೇಳಿದರು?. ಅಲ್ಲಿ ಈ ವಿಷಯವನ್ನು ತರುವ ಅಗತ್ಯವಿರಲಿಲ್ಲ. ಮಾತುಕತೆ ನಡೆದಿದ್ದು ಸತ್ಯ. ಎಂಟರಿಂದ ಒಂಬತ್ತು ಜನ ಕುಳಿತು ಮಾತುಕತೆ ನಡೆಯುತ್ತಿತ್ತು. ವಿರಾಟ್ ಕೊಹ್ಲಿ ಜೊತೆ ಮಾತನಾಡಿದ್ದಾರೆ ಎಂದು ಚೇತನ್ ಶರ್ಮಾ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ವಿರಾಟ್ ಕೊಹ್ಲಿ ಸುಳ್ಳು ಹೇಳಿದ್ದ. ಆತ ಏಕೆ ಸುಳ್ಳು ಹೇಳಿದ ಎಂಬುದು ಇಂದಿಗೂ ಯಾರಿಗೂ ತಿಳಿದಿಲ್ಲ. ಇದು ಅವರ ವೈಯಕ್ತಿಕ ವಿಚಾರ. ಅಂದು ಬೋರ್ಡ್ ವರ್ಸಸ್ ಪ್ಲೇಯರ್ ನಡುವೆ ವಿವಾದವಿತ್ತು ಎಂಬುದನ್ನು ಕೂಡ ಇದೇ ವೇಳೆ ಚೇತನ್ ಶರ್ಮಾ ಬಹಿರಂಗಪಡಿಸಿದ್ದಾರೆ.
ಕೊಹ್ಲಿ-ರೋಹಿತ್ ಟಿ20 ಖೇಲ್ ಖತಂ:
ಇದೇ ವೇಳೆ ಶುಭ್ಮನ್ ಗಿಲ್‌ಗೆ ಅವಕಾಶ ನೀಡಲು ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾರಂತಹ ದೊಡ್ಡ ಆಟಗಾರರಿಗೆ ಟಿ20 ಕ್ರಿಕೆಟ್ನಿಂದ ವಿಶ್ರಾಂತಿ ನೀಡಲಾಗಿದೆ. ಭವಿಷ್ಯದಲ್ಲಿ ರೋಹಿತ್ ಶರ್ಮಾ ಟಿ20 ತಂಡದ ಭಾಗವಾಗುವುದಿಲ್ಲ. ಬದಲಾಗಿ ಹಾರ್ದಿಕ್ ಪಾಂಡ್ಯ ದೀರ್ಘಾವಧಿಗೆ ನಾಯಕರಾಗಿರುತ್ತಾರೆ ಎಂದು ಚೇತನ್ ಶರ್ಮಾ ಬಹಿರಂಗಪಡಿಸಿದರು.
ನಾನು ಆಯ್ಕೆ ಸಮಿತಿಯ ಮುಖ್ಯಸ್ಥನಾದ ಮೇಲೆ ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ದೀಪಕ್ ಹೂಡಾ, ಶುಭಮನ್ ಗಿಲ್ ಮತ್ತು ಇತರ 15-20 ಆಟಗಾರರನ್ನು ತಂಡಕ್ಕೆ ಕರೆತಂದಿದ್ದೇನೆ.
ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ನಡುವೆ ಇದೀಗ ಯಾವುದೇ ಸಂಘರ್ಷವಿಲ್ಲ. ಆದರೆ ಇವರಿಬ್ಬರ ನಡುವೆ ಅಹಂನ ಸಂಘರ್ಷ ಏರ್ಪಡುತ್ತದೆ ಎಂದು ಚೇತನ್ ಶರ್ಮಾ ಹೇಳಿದ್ದಾರೆ.
ಯುವ ಬ್ಯಾಟ್ಸ್‌ಮನ್‌ಗಳಾದ ಇಶಾನ್ ಕಿಶನ್ ಮತ್ತು ಶುಭಮನ್ ಗಿಲ್ ಅವರ ಪ್ರಸ್ತುತ ಫಾರ್ಮ್‌ಗಳ ಬಗ್ಗೆ ಪ್ರತಿಕ್ರಿಯಿಸಿದ ಶರ್ಮಾ, ಅವರು ಖಂಡಿತವಾಗಿಯೂ ಶಿಖರ್ ಧವನ್, ಸಂಜು ಸ್ಯಾಮ್ಸನ್ ಮತ್ತು ಕೆಎಲ್ ರಾಹುಲ್ ಅವರ ವೃತ್ತಿಜೀವನವನ್ನು ಅಪಾಯಕ್ಕೆ ಸಿಲುಕಿಸಿದ್ದಾರೆ ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ ಚೇತನ್ ಶರ್ಮಾ ಅವರ ಈ ವಿಡಿಯೋ ಇದೀಗ ಭಾರೀ ವೈರಲ್ ಆಗಿದ್ದು, ಹೊಸ ಚರ್ಚೆಗೆ ಗ್ರಾಸವಾಗಿದೆ. ಅದರಲ್ಲೂ ಆಟಗಾರರನ್ನು ತಮ್ಮ ಆದ್ಯತೆಯ ಮೇಲೆ ಆಯ್ಕೆ ಮಾಡುತ್ತಿರುವುದಾಗಿ ನೀಡಿರುವ ಹೇಳಿಕೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ತಾಜಾ ಸುದ್ದಿ