ಪ್ರತಿಭಟನಾನಿರತ ವೇಳೆ ಪ್ರಜ್ಞೆ ತಪ್ಪಿ ಬಿದ್ದು ವಿದ್ಯಾರ್ಥಿ ಸಾವನ್ನಪ್ಪಿರುವಂತಹ ಘಟನೆ ನಗರದ ಅಜೀಂ ಪ್ರೇಮ್ ಜಿ ವಿವಿಯಲ್ಲಿ ನಡೆದಿದೆ.
ಮೃತ ವಿದ್ಯಾರ್ಥಿ ಅಭಿಜಿತ್
ಬೆಂಗಳೂರು: ಪ್ರತಿಭಟನಾನಿರತ ವೇಳೆ ಪ್ರಜ್ಞೆ ತಪ್ಪಿ ಬಿದ್ದು ವಿದ್ಯಾರ್ಥಿ ಸಾವನ್ನಪ್ಪಿರುವಂತಹ ಘಟನೆ ನಗರದ ಅಜೀಂ ಪ್ರೇಮ್ ಜಿ ವಿವಿ (Azim Premji VV) ಯಲ್ಲಿ ನಡೆದಿದೆ. ಡೆವಲಪ್ಮೆಂಟ್ ವಿಭಾಗದ ಪ್ರಥಮ ವರ್ಷದ ಎಂಎ ವಿದ್ಯಾರ್ಥಿ ಅಭಿಜಿತ್ ಮೃತ ವಿದ್ಯಾರ್ಥಿ. ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಳೆದ 12 ದಿನಗಳಿಂದ ಕ್ಯಾಂಪಸ್ ಒಳಗೆ ವಿವಿ ವಿದ್ಯಾರ್ಥಿಗಳಿಂದ ಪ್ರತಿಭಟನೆ ಮಾಡಲಾಗುತ್ತಿದೆ. ವಿದ್ಯಾರ್ಥಿಗಳ ಹೋರಾಟಕ್ಕೆ ವಿವಿ ಆಡಳಿತ ಮಂಡಳಿ ಸ್ಪಂದಿಸದ ಹಿನ್ನೆಲೆ 3 ದಿನಗಳಿಂದ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದರು. ಈ ವೇಳೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾಗ ವಿದ್ಯಾರ್ಥಿ ಅಭಿಜಿತ್ ಕುಸಿದು ಬಿದ್ದು ಮೃತಪಟ್ಟಿದ್ದಾನೆ. ಅಭಿಜಿತ್ ಸಾವಿಗೆ ವಿವಿ ನಿರ್ಲಕ್ಷ್ಯ ಕಾರಣ ಅಂತಾ ವಿದ್ಯಾರ್ಥಿಗಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿದ್ಯಾರ್ಥಿ ಸಾವಿನ ಬಗ್ಗೆ ಸ್ಪಷ್ಟನೆ ನೀಡಿದ ಅಜೀಂ ಪ್ರೇಮ್ ಜಿ ಯೂನಿವರ್ಸಿಟಿ
ಸದ್ಯ ಈ ವಿಚಾರವಾಗಿ ಅಜೀಂ ಪ್ರೇಮ್ ಜಿ ಯೂನಿವರ್ಸಿಟಿಯ ಆಡಳಿತ ಮಂಡಳಿಯಿಂದ ಪ್ರಕಟಣೆ ಹೊರಡಿಸಲಾಗಿದೆ. ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿ ಮೃತಪಟ್ಟಿರುವುದು ದುರದೃಷ್ಟಕರ ಸಂಗತಿ. ಘಟನೆಯಿಂದ ನಾವು ಆಘಾತಕ್ಕೊಳಗಾಗಿದ್ದೇವೆ ಮತ್ತು ತೀವ್ರ ದುಖಃವಾಗಿದೆ. ಆದ್ರೆ ವಿದ್ಯಾರ್ಥಿ ಉಪವಾಸ ಪ್ರತಿಭಟನೆಯಲ್ಲಿ ಮೃತಪಟ್ಟಿಲ್ಲ. ವಿದ್ಯಾರ್ಥಿ ಉಪವಾಸ ಸತ್ಯಗ್ರಹ ವೇಳೆ ಮೃತಪಟ್ಟಿರುವ ಆರೋಪ ಸುಳ್ಳು.
ಮೃತ ವಿದ್ಯಾರ್ಥಿಯು ಫೆಬ್ರವರಿ 23, ಗುರುವಾರ ಅಥವಾ ಫೆಬ್ರವರಿ 24, ಶುಕ್ರವಾರ ಉಪವಾಸ ಸತ್ಯಾಗ್ರಹದಲ್ಲಿ ಭಾಗಿಯಾಗಿಲ್ಲ. ವಾರ್ಷಿಕ ವಿದ್ಯಾರ್ಥಿ ಉತ್ಸವ ಉದ್ಘಾಟನಾ ಸಮಾರಂಭದಲ್ಲಿ ವಿದ್ಯಾರ್ಥಿಯು ಕುಸಿದು ಬಿದ್ದಿದ್ದು, ತಕ್ಷಣವೇ ವೈದ್ಯಕೀಯ ಚಿಕಿತ್ಸೆಗೆ ಆಸ್ಪತ್ರೆಗೆ ಕರೆದ್ಯೊಯಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ಸ್ಪಷ್ಟನೆ ನೀಡಿದೆ.