ಮಹಾರಾಷ್ಟ್ರ ಸರ್ಕಾರ ಬೆಳಗಾವಿ ಗಡಿ ಪ್ರದೇಶಕ್ಕೆ ಅನುದಾನ ಬಿಡುಗಡೆ ಮಾಡಿದರೆ ನಾನ್ಯಾಕೆ ರಾಜೀನಾಮೆ ನೀಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಪ್ರಶ್ನಿಸಿದ್ದಾರೆ.
Image Credit source: indiatoday.in
ಬೆಳಗಾವಿ: ಮಹಾರಾಷ್ಟ್ರ (Maharashtra) ಸರ್ಕಾರ ಬೆಳಗಾವಿ (Belagavi) ಗಡಿ ಪ್ರದೇಶಕ್ಕೆ ಅನುದಾನ ಬಿಡುಗಡೆ ಮಾಡಿದರೆ ನಾನ್ಯಾಕೆ ರಾಜೀನಾಮೆ ನೀಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಅವರನ್ನು ಪ್ರಶ್ನಿಸಿದ್ದಾರೆ. ನೆರೆ ರಾಜ್ಯವು ಬೆಳಗಾವಿ ಗಡಿ ಭಾಗಕ್ಕೆ 54 ಕೋಟಿ ರೂ. ಅನುದಾನ ಬಿಡುಗಡೆ ಮಾಡಿರುವ ವಿಚಾರವಾಗಿ ಡಿಕೆಶಿ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾಡಿರುವ ಟೀಕೆಗಳಿಗೆ ಅವರು ಬೆಳಗಾವಿಯಲ್ಲಿ ತಿರುಗೇಟು ನೀಡಿದ್ದಾರೆ. ನಾವು ಕೆಪಿಸಿಸಿ ಅಧ್ಯಕ್ಷರಿಂದ ಪಾಠ ಕಲಿಯಬೇಕಿಲ್ಲ. ನಾವೂ ಕೂಡ ಮಹಾರಾಷ್ಟ್ರದಲ್ಲಿರುವ ಫಂಡರಪುರ, ತುಳಜಾಪುರಕ್ಕೆ ಹೋಗುವ ಕರ್ನಾಟಕದವರಿಗೆ ಹಣ ಬಿಡುಗಡೆ ಮಾಡುತ್ತೇವೆ. ಅವರು ಯಾವ ಅನುದಾನ ಬಿಡುಗಡೆ ಮಾಡಿದ್ದಾರೆ ಎಂಬುದನ್ನು ಪರಿಶೀಲಿಸುತ್ತೇನೆ. ಮಹಾರಾಷ್ಟ್ರದ ಹಸ್ತಕ್ಷೇಪವನ್ನು ಯಾವ ರೀತಿಯಲ್ಲಿ ತಡೆಗಟ್ಟಬೇಕು ಎಂಬುದರ ಬಗ್ಗೆ ಪರಾಮರ್ಶೆ ನಡೆಸಲಾಗುವುದು ಎಂದು ಬೊಮ್ಮಾಯಿ ಹೇಳಿದ್ದಾರೆ.
ಮಹಾರಾಷ್ಟ್ರ ಸರ್ಕಾರದಿಂದ ಬೆಳಗಾವಿ ಗಡಿ ಭಾಗದಲ್ಲಿ ವಿವಿಧ ಯೋಜನೆಗಳ ಅನುಷ್ಠಾನಕ್ಕೆ 54 ಕೋಟಿ ರೂ. ಬಿಡುಗಡೆಯಾಗಿರುವುದಕ್ಕೆ ಡಿಕೆಶಿ ಹಾಗೂ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದ್ದರು. ಪತ್ರಿಕಾಗೋಷ್ಠಿ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದ ಅವರು, ರಾಜ್ಯ ಸರ್ಕಾರದ ವಿರುದ್ಧವೂ ವಾಗ್ದಾಳಿ ನಡೆಸಿದ್ದರು.
ಇದನ್ನೂ ಓದಿ: ಮಾ.20ರಂದು ಕರ್ನಾಟಕಕ್ಕೆ ರಾಹುಲ್ ಗಾಂಧಿ, ಬೆಳಗಾವಿಯಿಂದಲೇ ಚುನಾವಣೆಗೆ ರಣ ಕಹಳೆ
ಕರ್ನಾಟಕದ ಮಹಾರಾಷ್ಟ್ರದ ಗಡಿಭಾಗದ ಹಳ್ಳಿಗಳಲ್ಲಿ ವಿವಿಧ ಯೋಜನೆಗಳ ಜಾರಿಗೆ ಮಹಾರಾಷ್ಟ್ರ ಸರ್ಕಾರ ₹54 ಕೋಟಿ ಮಂಜೂರು ಮಾಡಿರುವುದು ಕನ್ನಡಿಗರ ಸ್ವಾಭಿಮಾನ ಕೆಣಕುವಂತಹ ನಡೆ. ನಾಡಿನ ಹಿತಕ್ಕೆ ಜೀವ ಪಣಕ್ಕಿಟ್ಟು ಹೊರಡಲು ನಾವು ಸಿದ್ಧ. ಕನ್ನಡಿಗರ ಸ್ವಾಭಿಮಾನ, ಕನ್ನಡದ ನೆಲ ಬಲಿ ಕೊಡುತ್ತಿರುವ ಬಸವರಾಜ ಬೊಮ್ಮಾಯಿ ಅವರು ರಾಜೀನಾಮೆ ನೀಡಬೇಕು ಎಂದು ಡಿಕೆಶಿ ಒತ್ತಾಯಿಸಿದ್ದರು.
ಕರ್ನಾಟಕ ಮಹಾರಾಷ್ಟ್ರದ ಗಡಿಬಾಗದ ಹಳ್ಳಿಗಳಲ್ಲಿ ವಿವಿಧ ಯೋಜನೆಯ ಜಾರಿಗೆ ಮಹಾರಾಷ್ಟ್ರ ಸರ್ಕಾರ ₹54 ಕೋಟಿ ಮಂಜೂರು ಮಾಡಿರುವುದು ಕನ್ನಡಿಗರ ಸ್ವಾಭಿಮಾನ ಕೆಣಕುವಂತಹ ನಡೆ.
ನಾಡಿನ ಹಿತಕ್ಕೆ ಜೀವ ಪಣಕ್ಕಿಟ್ಟು ಹೊರಡಲು ನಾವು ಸಿದ್ದ.ಕನ್ನಡಿಗರ ಸ್ವಾಭಿಮಾನ, ಕನ್ನಡದ ನೆಲ ಬಲಿ ಕೊಡುತ್ತಿರುವ @BSBommai ರಾಜೀನಾಮೆ ನೀಡಬೇಕು.
– @DKShivakumar pic.twitter.com/WIFIoEsBWv— Karnataka Congress (@INCKarnataka) March 15, 2023
ಮಾಧ್ಯಮ ಪ್ರಕಟಣೆಯನ್ನೂ ಬಿಡುಗಡೆ ಮಾಡಿದ್ದ ಅವರು, ನಮ್ಮ ಪ್ರಾಣವನ್ನು ಪಣಕ್ಕಿಟ್ಟಾದರೂ ಸರಿಯೇ, ರಾಜ್ಯದ ನೆಲ, ಜಲ ಭಾಷೆಯನ್ನು ರಕ್ಷಣೆ ಮಾಡಿಕೊಳ್ಳಲಿದ್ದೇವೆ. ನಮ್ಮ ಗಡಿ ಭಾಗದ ಒಂದಿಂಚು ಭೂಮಿಯನ್ನೂ ಮಹಾರಾಷ್ಟ್ರಕ್ಕೆ ಬಿಟ್ಟುಕೊಡುವುದಿಲ್ಲ ಎಂದು ಡಿಕೆಶಿ ಹೇಳಿದ್ದರು. ಜತೆಗೆ, ಬಿಜೆಪಿ ಸರ್ಕಾರವು ರಾಜಕೀಯ ಕಾರಣಗಳಿಗಾಗಿ ಕನ್ನಡಿಗರನ್ನು ಬಲಿಕೊಡಲು ಮುಂದಾಗಿದೆ. ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ತರುತ್ತಿದೆ. ಇದರ ವಿರುದ್ಧ ಹೋರಾಡಬೇಕು ಎಂದು ಕನ್ನಡ ಪರ ಸಂಘಟನೆಗಳಿಗೆ ಕೆಪಿಸಿಸಿ ಅಧ್ಯಕ್ಷರು ಕರೆ ನೀಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ