IND vs AUS: ಇಂದೋರ್‌ನ ಪಿಚ್ ಬಗ್ಗೆ ಮೊದಲ ದಿನವೇ ಚರ್ಚೆ ಪ್ರಾರಂಭವಾಗಿತ್ತು. ಮಾರ್ಚ್ 1 ರಿಂದ ಆರಂಭವಾದ ಈ ಟೆಸ್ಟ್‌ನ ಮೊದಲ ಓವರ್‌ನಿಂದಲೇ ಚೆಂಡು ಸಾಕಷ್ಟು ತಿರುವು ಪಡೆಯಲಾರಂಭಿಸಿತು
ರೋಹಿತ್ ಶರ್ಮಾ
ಇಂದೋರ್ ಟೆಸ್ಟ್ ಮುಗಿದು ಈಗಾಗಲೇ 2 ದಿನ ಕಳೆದಿವೆ. ಅದರೂ ಈ ಟೆಸ್ಟ್ ಬಗ್ಗೆ, ಈ ಪಂದ್ಯದಲ್ಲಿ ಟೀಂ ಇಂಡಿಯಾದ (India Vs Australia) ಪ್ರದರ್ಶನದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಒಂದೆಡೆ ಮೊದಲೆರಡು ಟೆಸ್ಟ್ ಪಂದ್ಯಗಳಲ್ಲಿ ಟೀಂ ಇಂಡಿಯಾ (Team India) ಮೇಲುಗೈ ಸಾಧಿಸಿದ್ದನ್ನು ನೋಡಿದರೆ, 3ನೇ ಟೆಸ್ಟ್ ಕೂಡ ಭಾರತದ ಮಡಿಲಿಗೆ ಬೀಳಲಿದೆ ಎಂದು ಭಾವಿಸಲಾಗಿತ್ತು. ಆದರೆ ಎಲ್ಲರ ಲೆಕ್ಕಾಚಾರವನ್ನು ಆಸೀಸ್ ಸ್ಪಿನ್ನರ್‌ಗಳು ಬುಡಮೇಲು ಮಾಡಿದರು. ಹೀಗಾಗಿ 5 ದಿನ ನಡೆಯಬೇಕಾದ ಟೆಸ್ಟ್ ಪಂದ್ಯ ಕೇವಲ 3 ದಿನದೊಳಗೆ ಅಂತ್ಯವಾಯಿತು. ಇಡೀ ಪಂದ್ಯದಲ್ಲಿ ಸ್ಪಿನ್ನರ್ಗಳ ಅಬ್ಬರವನ್ನು ಬಿಟ್ಟರೆ ಮತ್ತೇನನ್ನೂ ಕಾಣಲು ಸಾಧ್ಯವಾಗಲೆ ಇಲ್ಲ. ಹೀಗಾಗಿ ಹೋಳ್ಕರ್ ಸ್ಟೇಡಿಯಂ ಪಿಚ್ ಬಗ್ಗೆ ಸಾಕಷ್ಟು ಚರ್ಚೆ ಹುಟ್ಟಿಕೊಂಡಿತು. ಈಗ ಅಂತಿಮವಾಗಿ ಈ ಪಿಚ್‌ನ ಬಗ್ಗೆ ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ತೀರ್ಪು ನೀಡಿದೆ. ಐಸಿಸಿ ಮ್ಯಾಚ್ ರೆಫರಿ ಈ ಪಿಚ್ ಅನ್ನು ‘ಕಳಪೆ’ ಎಂದು ಬಣ್ಣಿಸಿದ್ದಾರೆ. ಇದರಿಂದಾಗಿ ಇಂದೋರ್‌ನ ಹೋಳ್ಕರ್ ಸ್ಟೇಡಿಯಂ ಪಿಚ್‌ಗೆ ಶಿಕ್ಷೆಯಾಗಿ ಡಿಮೆರಿಟ್ ಅಂಕಗಳನ್ನು ನೀಡಲಾಗಿದೆ.
ಸುಮಾರು ಐದು ವರ್ಷಗಳ ನಂತರ ಹೋಳ್ಕರ್ ಸ್ಟೇಡಿಯಂನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಸ್ಪಿನ್ನರ್‌ಗಳು ಪ್ರಾಬಲ್ಯ ಮೆರೆದರು. ಪಂದ್ಯದಲ್ಲಿ ಒಟ್ಟು 7 ಸೆಷನ್‌ಗಳನ್ನು ಮಾತ್ರ ಆಡಿದ್ದು, ಇದರಲ್ಲಿ 31 ವಿಕೆಟ್‌ಗಳು ಬಿದ್ದವು. ಈ ಪೈಕಿ ಮೊದಲ 30 ವಿಕೆಟ್‌ಗಳು ಕೇವಲ ಎರಡು ದಿನಗಳಲ್ಲಿ ಪತನಗೊಂಡವು. ಈ 31 ವಿಕೆಟ್‌ಗಳ ಪೈಕಿ 26 ವಿಕೆಟ್‌ಗಳನ್ನು ಉಭಯ ತಂಡಗಳ ಸ್ಪಿನ್ನರ್‌ಗಳು ಕಬಳಿಸಿದರೆ, ಕೇವಲ 4 ವಿಕೆಟ್‌ಗಳನ್ನು ವೇಗಿಗಳು ಪಡೆಯುವಲ್ಲಿ ಯಶಸ್ವಿಯಾದರು. ಇನ್ನುಳಿದಂತೆ ಒಂದು ವಿಕೆಟ್ ರನೌಟ್ ಮುಖಾಂತರ ಬಿದ್ದಿತು. ಈ ಹಿಂದೆ, ನಾಗ್ಪುರ ಮತ್ತು ದೆಹಲಿ ಟೆಸ್ಟ್‌ನ ಪಿಚ್ ಬಗ್ಗೆಯೂ ಪ್ರಶ್ನೆಗಳನ್ನು ಎತ್ತಲಾಗಿತ್ತು ಆದರೆ ಅವುಗಳಿಗೆ ‘ಸರಾಸರಿ’ ರೇಟಿಂಗ್ ಸಿಕ್ಕಿತು.
IND vs AUS: ಟೀಂ ಇಂಡಿಯಾ ಸೋಲಿಗೆ ಈ ಬೌಲರ್ ನೇರ ಕಾರಣ ಎಂದ ಸುನೀಲ್ ಗವಾಸ್ಕರ್
ಛೀಮಾರಿ ಹಾಕಿದ ಐಸಿಸಿ
ಮಾರ್ಚ್ 3 ರ ಬೆಳಿಗ್ಗೆ ಪಂದ್ಯ ಮುಕ್ತಾಯಗೊಂಡರೆ, ಸಂಜೆ ವೇಳೆಗೆ ಐಸಿಸಿ ಪಿಚ್ ರೇಟಿಂಗ್ ನೀಡಿದೆ. ಮ್ಯಾಚ್ ರೆಫರಿ ಕ್ರಿಸ್ ಬ್ರಾಡ್ ಅವರು ಭಾರತ ಮತ್ತು ಆಸ್ಟ್ರೇಲಿಯಾದ ನಾಯಕರೊಂದಿಗೆ ಮಾತನಾಡಿ ತಮ್ಮ ವರದಿಯನ್ನು ನೀಡಿದ್ದು, ಪಿಚ್‌ಗೆ ‘ಕಳಪೆ’ ರೇಟಿಂಗ್ ನೀಡಿದ್ದಾರೆ ಎಂದು ಐಸಿಸಿ ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆ ಮಾಡಿದೆ. ಇದರೊಂದಿಗೆ ಐಸಿಸಿಯ ಪಿಚ್ ಮತ್ತು ಔಟ್‌ಫೀಲ್ಡ್ ಮಾನಿಟರಿಂಗ್ ಪ್ರಕ್ರಿಯೆಯಡಿ ಹೋಳ್ಕರ್ ಸ್ಟೇಡಿಯಂಗೆ 3 ಡಿಮೆರಿಟ್ ಅಂಕಗಳನ್ನು ಶಿಕ್ಷೆಯಾಗಿ ನೀಡಲಾಗಿದೆ.
1 ವರ್ಷ ನಿಷೇಧ?
ಐಸಿಸಿಯ ಈ ನಿರ್ಧಾರದ ನಂತರ ಮುಂದಿನ ದಿನಗಳಲ್ಲಿ ಹೋಳ್ಕರ್ ಸ್ಟೇಡಿಯಂ ಕೂಡ ನಿಷೇಧಕ್ಕೊಳಗಾಗಬಹುದು. ಐಸಿಸಿ ನಿಯಮಗಳ ಪ್ರಕಾರ, ಯಾವುದೇ ಪಿಚ್ ಸತತ ಐದು ವರ್ಷಗಳ ಅವಧಿಯಲ್ಲಿ 5 ಡಿಮೆರಿಟ್ ಪಾಯಿಂಟ್‌ಗಳನ್ನು ಪಡೆದರೆ, ಆ ಕ್ರೀಡಾಂಗಣವನ್ನು 12 ತಿಂಗಳ ಕಾಲ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ಅಮಾನತುಗೊಳಿಸಲಾಗುತ್ತದೆ. ಈ ನಿಯಮದ ಪ್ರಕಾರ ಹೋಳ್ಕರ್ ಸ್ಟೇಡಿಯಂ ಈಗ 3 ಡಿಮೆರಿಟ್ ಅಂಕಗಳನ್ನು ಪಡೆದುಕೊಂಡಿದ್ದು, ಮುಂದಿನ 5 ವರ್ಷಗಳಲ್ಲಿ ಈ ಮೈದಾನ ಮತ್ತೆ 2 ಡಿಮೆರಿಟ್ ಅಂಕಗಳನ್ನು ಪಡೆದರೆ, ನಂತರ ಈ ಪಿಚ್ನಲ್ಲಿ 1 ವರ್ಷಗಳ ಕಾಲ ಕ್ರಿಕೆಟ್ ನಿಷೇಧಿಸಬಹುದಾಗಿದೆ.
ಅಸಮ ಬೌನ್ಸ್ ಕೂಡ ಬ್ಯಾಟ್ಸ್ಮನ್ಗಳನ್ನು ಕಾಡಿತು
ಇಂದೋರ್‌ನ ಪಿಚ್ ಬಗ್ಗೆ ಮೊದಲ ದಿನವೇ ಚರ್ಚೆ ಪ್ರಾರಂಭವಾಗಿತ್ತು. ಮಾರ್ಚ್ 1 ರಿಂದ ಆರಂಭವಾದ ಈ ಟೆಸ್ಟ್‌ನ ಆರನೇ ಓವರ್‌ನಲ್ಲಿ ಆಸ್ಟ್ರೇಲಿಯಾ ಸ್ಪಿನ್ನರ್ಗಳನ್ನು ದಾಳಿಗಿಳಿಸಿತು. ಅಲ್ಲದೆ ಮೊದಲ ಓವರ್‌ನಿಂದಲೇ ಚೆಂಡು ಸಾಕಷ್ಟು ತಿರುವು ಪಡೆಯಲಾರಂಭಿಸಿತು. ಇದರೊಂದಿಗೆ ನಿರಂತರ ಅಸಮ ಬೌನ್ಸ್ ಕೂಡ ಬ್ಯಾಟ್ಸ್ಮನ್ಗಳನ್ನು ಕಾಡಿತು. ಹೀಗಾಗಿ ಟೀಂ ಇಂಡಿಯಾದ ಎರಡೂ ಇನ್ನಿಂಗ್ಸ್‌ಗಳು ಕೇವಲ ಎರಡೇ ದಿನಗಳಲ್ಲಿ ಮುಕ್ತಾಯಗೊಂಡಿತು. ಅಂತಿಮವಾಗಿ ಮೂರನೇ ದಿನದ ಮೊದಲ ಸೆಷನ್‌ನಲ್ಲಿ 76 ರನ್‌ಗಳ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ಸುಲಭವಾಗಿ ದಡ ಸೇರಿತು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ