Abdul Nazir: ನಿವೃತ್ತ ನ್ಯಾಯಮೂರ್ತಿ ಎಸ್ ಅಬ್ದುಲ್ ನಜೀರ್ ಅವರು ಶುಕ್ರವಾರ ಆಂಧ್ರಪ್ರದೇಶದ ರಾಜ್ಯಪಾಲರಾಗಿ ಪ್ರಮಾಣ ವಚನ ಸ್ವೀಕರಿಸಿದರು.
Andhra Governor. Abdul Nazir
ವಿಜಯವಾಡ: ನಿವೃತ್ತ ನ್ಯಾಯಮೂರ್ತಿ ಎಸ್ ಅಬ್ದುಲ್ ನಜೀರ್ (Abdul Nazir) ಅವರು ಶುಕ್ರವಾರ ಆಂಧ್ರಪ್ರದೇಶದ ರಾಜ್ಯಪಾಲರಾಗಿ (Andhra Governor) ಪ್ರಮಾಣ ವಚನ ಸ್ವೀಕರಿಸಿದರು. ಶುಕ್ರವಾರ ಆಂಧ್ರ ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ಹೈದರಾಬಾದ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಜಸ್ಟಿಸ್ ಪ್ರಶಾಂತ್ ಕುಮಾರ್ ಮಿಶ್ರಾ ಅವರು ನೂತನ ರಾಜ್ಯಪಾಲರಿಗೆ ಪ್ರಮಾಣ ವಚನ ಬೋಧಿಸಿದರು. ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ, ಅವರ ಪತ್ನಿ ವೈಎಸ್ ಭಾರತಿ ರೆಡ್ಡಿ, ಮುಖ್ಯ ಕಾರ್ಯದರ್ಶಿ ಡಾ ಕೆಎಸ್ ಜವಾಹರ್ ರೆಡ್ಡಿ, ಹಲವು ಹಾಲಿ ಸಚಿವರು, ಹೈಕೋರ್ಟ್ ನ್ಯಾಯಮೂರ್ತಿಗಳು ಮತ್ತು ಹಿರಿಯ ಅಧಿಕಾರಿಗಳು ಪ್ರಮಾಣ ವಚನ ಸಮಾರಂಭದಲ್ಲಿ ಭಾಗವಹಿಸಿದ್ದರು.
ಆಂಧ್ರದ ರಾಜ್ಯಪಾಲರಾಗಿ ಬಿಸ್ವ ಭೂಷಣ್ ಹರಿಚಂದನ್ ಅವರ ನಂತರ ನ್ಯಾಯಮೂರ್ತಿ ನಜೀರ್ ಅವರು ನವೆಂಬರ್ 2019 ರಲ್ಲಿ ವಿವಾದಿತ ರಾಮ ಜನ್ಮಭೂಮಿ ಪ್ರಕರಣದ ಮೊಕದ್ದಮೆಯನ್ನು ಇತ್ಯರ್ಥಪಡಿಸಿದ ಐದು ನ್ಯಾಯಾಧೀಶರ ಪೀಠದಲ್ಲಿ ಇವರು ಒಬ್ಬರಾಗಿದ್ದರು. ಇದಕ್ಕಿಂತಲ್ಲೂ ಅವರು ಕರ್ನಾಟಕದ ಮೂಡಬಿದರೆಯ ನಿವಾಸಿ ಕೂಡ ಹೌದು.
ಅಂದಿನ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ), ರಂಜನ್ ಗೊಗೊಯ್ ನೇತೃತ್ವದ ಅಯೋಧ್ಯೆ ಪೀಠದಲ್ಲಿ ನ್ಯಾಯಮೂರ್ತಿ ನಜೀರ್ ಏಕೈಕ ಮುಸ್ಲಿಂ ವ್ಯಕ್ತಿಯಾಗಿದ್ದರು. ನ್ಯಾಯಮೂರ್ತಿ ನಜೀರ್, 61, 1983 ರಲ್ಲಿ ಕರ್ನಾಟಕ ಹೈಕೋರ್ಟ್‌ನಲ್ಲಿ ಮೊದಲ ಬಾರಿಗೆ ವಕೀಲರಾಗಿ ಸೇವೆ ಸಲ್ಲಿಸಿದರು. ನಂತರ 2003ರಲ್ಲಿ ಹೈಕೋರ್ಟ್‌ನಲ್ಲಿ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಕಗೊಂಡರು. ನ್ಯಾಯಮೂರ್ತಿ ನಜೀರ್ ಅವರು ಫೆಬ್ರವರಿ 17, 2017 ರಂದು ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ಬಡ್ತಿ ಪಡೆದರು.
ಮಂಗಳವಾರ ಗನ್ನವರಂ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆಂಧ್ರಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ ಅವರು ಹರಿಚಂದನ್ ಅವರನ್ನು ಬೀಳ್ಕೊಟ್ಟರು. ಛತ್ತೀಸ್‌ಗಢದ ಹೊಸ ಗವರ್ನರ್ ಆಗಿ ನೇಮಕಗೊಂಡ ಹರಿಚಂದನ್ ಅವರು 2019 ರಿಂದ 2023 ರವರೆಗೆ ಆಂಧ್ರ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದರು.