ಮದ್ದೂರು ಬಹಳ ದೊಡ್ಡ ನಾಯಕರನ್ನು ಕೊಟ್ಟ ಪವಿತ್ರ ಕ್ಷೇತ್ರ. ಎಸ್ಎಂ ಕೃಷ್ಣ, ಮಾದೇಗೌಡ ಸೇರಿದಂತೆ ಹಿರಿಯರನ್ನು ಕೊಟ್ಟ ಕ್ಷೇತ್ರವಾಗಿದೆ. ಈ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷವನ್ನು ಸೋಲಿಸುವುದೇ ನಮ್ಮ ಉದ್ದೇಶವಾಗಿದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ಡಿಕೆ ಶಿವಕುಮಾರ್ ಮತ್ತು ನರೇಂದ್ರ ಮೋದಿ
ಬೆಂಗಳೂರು: ಕರ್ನಾಟಕಕ್ಕೆ ನಿನ್ನೆ (ಮಾರ್ಚ್ 12) ಭೇಟಿ ಕೊಟ್ಟಿದ್ದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಕೇವಲ ಕಾಂಗ್ರೆಸ್ ಪಕ್ಷದ ವಿರುದ್ಧ ಮಾತನಾಡಿದ್ದಾರೆ. ಜೆಡಿಎಸ್ ಸುದ್ದಿಗೆ ಹೋಗಲಿಲ್ಲ. ಅಂದರೆ ಪ್ರಧಾನಿಯವರ ಉದ್ದೇಶ ಏನು ಎಂಬುದು ಅರ್ಥವಾಗತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (DK Shivakumar) ಹೇಳಿದ್ದಾರೆ. ನಗರದಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದರು. ಕರ್ನಾಟಕ ಭೇಟಿ ವೇಳೆ ಪ್ರಧಾನಿ ಮೋದಿ ಅವರು ಭಾಷಣದುದ್ದಕ್ಕೂ ಕಾಂಗ್ರೆಸ್ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದರು. ಕೆಲ ವರ್ಷಗಳ ಹಿಂದೆ ಲಂಡನ್ನಲ್ಲಿ ಬಸವಣ್ಣರವರ ಮೂರ್ತಿ ಅನಾವರಣಗೊಳಿಸುವ ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ. ಆದರೆ ಇಂದು ಬಸವೇಶ್ವರರಿಗೆ ಕೆಲವೊಬ್ಬರು ಅಪಮಾನ ಮಾಡುತ್ತಿದ್ದಾರೆ ಎಂದು ಪರೋಕ್ಷವಾಗಿ ರಾಹುಲ್ ಗಾಂಧಿ (Rahul Gandhi) ವಿರುದ್ಧ ವಾಗ್ದಾಳಿ ಮಾಡಿದ್ದರು. ಲಂಡನ್ನಲ್ಲಿ ಭಾರತವನ್ನು ಟೀಕಿಸಿದ್ದವರಿಗೆ ನೀವು ಬೆಂಬಲಿಸಬೇಡಿ ಅಂತಾನು ಹೇಳಿದ್ದರು.
2014ರ ಮೊದಲು ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರ ಬಡವರನ್ನು ಮತ್ತಷ್ಟು ಕಾಡಿತು. ಬಡವರಿಗಾಗಿ ಇದ್ದ ಹಣವನ್ನು ಕಾಂಗ್ರೆಸ್ ಸರ್ಕಾರ ಲೂಟಿ ಮಾಡಿದೆ. ಕಾಂಗ್ರೆಸ್ ಪಕ್ಷವು ಬಡವರ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ. ಅವರು ಬಡವರ ಬಗ್ಗೆ ಎಂದಿಗೂ ಕಾಳಜಿ ವಹಿಸುತ್ತಿಲ್ಲ. ಕಾಂಗ್ರೆಸ್ ‘ಮೋದಿಗೆ ಸಮಾಧಿ ತೋಡುವ’ ಕನಸು ಕಾಣುತ್ತಿದೆ. ಕಾಂಗ್ರೆಸ್ ‘ಮೋದಿ ಸಮಾಧಿ ತೋಡುವಲ್ಲಿ’ ನಿರತವಾಗಿದ್ದರೆ, ಮೋದಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ನಿರ್ಮಾಣ ಮತ್ತು ಬಡವರ ಬದುಕನ್ನು ಸುಗಮಗೊಳಿಸುವಲ್ಲಿ ನಿರತರಾಗಿದ್ದಾರೆ ಎಂದು ಮೋದಿ ಹೇಳಿದ್ದರು.
ಇದನ್ನೂ ಓದಿ: ಫೈಟರ್ ರವಿಗೆ ಕೈಮುಗಿದ ಮೋದಿ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ರಿಯಾಕ್ಷನ್ ಹೀಗಿದೆ
ಇನ್ನು, ಮುಂದುವರೆದು ಮದ್ದೂರು ಕ್ಷೇತ್ರದ ಟಿಕೆಟ್ ವಿಚಾರವಾಗಿ ಮಾತನಾಡಿದ ಡಿ.ಕೆ.ಶಿವಕುಮಾರ್, ಗುರುಚರಣ್, ಉದಯ್ ಗೌಡ ಜೊತೆ ಮದ್ದೂರು ಟಿಕೆಟ್ ವಿಚಾರವಾಗಿ ನಾಲ್ಕೈದು ಸುತ್ತಿನ ಮಾತುಕತೆ ಆಗಿದೆ. ಯಾರಿಗೆ ಟಿಕೆಟ್ ಕೊಟ್ಟರೂ ಇಬ್ಬರು ಒಟ್ಟಾಗಿ ಕೆಲಸ ಮಾಡುತ್ತಾರೆ ಎಂದು ಹೇಳಿದರು. ಮದ್ದೂರು ಬಹಳ ದೊಡ್ಡ ನಾಯಕರನ್ನು ಕೊಟ್ಟ ಪವಿತ್ರ ಕ್ಷೇತ್ರವಾಗಿದೆ. ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ, ಮಾದೇಗೌಡ ಸೇರಿದಂತೆ ಹಿರಿಯರನ್ನು ಕೊಟ್ಟ ಕ್ಷೇತ್ರವಾಗಿದೆ ಎಂದರು.
ಮದ್ದೂರಿನಲ್ಲಿ ಜೆಡಿಎಸ್ ಸೋಲಿಸಬೇಕೆಂಬುದೇ ನಮ್ಮ ಉದ್ದೇಶ: ಡಿಕೆಶಿ
ರೈತರು ಬಹಳ ಪ್ರಜ್ಞಾವಂತರಾಗಿರುವ ಕ್ಷೇತ್ರ ಮದ್ದೂರು ಆಗಿದೆ. ನಮ್ಮ ಕೆಲವು ತಪ್ಪುಗಳಿಂದ ಮದ್ದೂರು ಕ್ಷೇತ್ರ ಕಳೆದುಕೊಂಡಿದ್ದೆವು. ಆದರೆ ಈ ಬಾರಿ ನಮ್ಮ ನಾಯಕರೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಲು ನಿರ್ಧಾರ ಮಾಡಿದ್ದಾರೆ. ಉದಯ್ ಗೌಡ ಮದ್ದೂರಿನಲ್ಲಿ ಸ್ವಂತ ಶಕ್ತಿಯನ್ನ ಬೆಳೆಸಿಕೊಂಡಿದ್ದಾರೆ. ಮದ್ದೂರಿನಲ್ಲಿ ಜೆಡಿಎಸ್ ಸೋಲಿಸಬೇಕೆಂಬುದೇ ನಮ್ಮ ಉದ್ದೇಶ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಉದಯ್ ಗೌಡ ವಿರುದ್ಧದ ಆರೋಪಕ್ಕೆ ಡಿಕೆಶಿ ಪ್ರತಿಕ್ರಿಯೆ
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಪತನಕ್ಕೆ ಉದಯ ಗೌಡ ಕಿಂಗ್ಪಿನ್ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ರಾಜಕಾರಣದಲ್ಲಿ ಇವೆಲ್ಲಾ ಆಗುತ್ತಿರುತ್ತವೆ. ಕಾಂಗ್ರೆಸ್‌ನಲ್ಲಿದ್ದವರು ಬೇರೆ ಕಡೆ ಹೋಗಿಲ್ಲವಾ? ಅದೇ ರೀತಿ ಇದು. ನನಗೂ, ಹೆಚ್.ಡಿ.ಕುಮಾರಸ್ವಾಮಿಗೆ ಸಾಕಷ್ಟು ಭಿನ್ನಾಭಿಪ್ರಾಯವಿತ್ತು. ಆದಾರೂ ಹೈಕಮಾಂಡ್ ಹೇಳಿದಾಗ ಇಬ್ಬರೂ ತಬ್ಬಿಕೊಂಡಿಲ್ಲವಾ? ಹಾಗೆ ಇವರೂ ತಬ್ಬಿಕೊಳ್ಳುತ್ತಾರೆ ಬಿಡಿ ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ