ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರು ಮುಷ್ಕರಕ್ಕೆ ತೀರ್ಮಾನಿಸಿದ ಬೆನ್ನಲ್ಲೇ ಸರ್ಕಾರವು 4 ನಿಗಮಗಳ ಎಂಡಿಗಳ ಜತೆ ಸಭೆ ನಡೆಸಿದೆ. ಆದರೆ, ನಿಗಮಗಳ ನೌಕರರು ವೇತನ ಹೆಚ್ಚಳದ ಬೇಡಿಕೆ ಸಡಿಲಿಸಲು ಸಮ್ಮತಿಸದೆ ಪಟ್ಟು ಹಿಡಿದ ಕಾರಣ ಒಮ್ಮತಕ್ಕೆ ಬರುವಲ್ಲಿ ಸಭೆ ವಿಫಲವಾಗಿದೆ.
ಕೆಎಸ್ಆರ್ಟಿಸಿ ಬಸ್ (ಸಾಂದರ್ಭಿಕ ಚಿತ್ರ)
ಬೆಂಗಳೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (KSRTC) ನೌಕರರು ಮುಷ್ಕರಕ್ಕೆ ತೀರ್ಮಾನಿಸಿದ ಬೆನ್ನಲ್ಲೇ ಸರ್ಕಾರವು 4 ನಿಗಮಗಳ ಎಂಡಿಗಳ ಜತೆ ಸಭೆ ನಡೆಸಿದೆ. ಆದರೆ, ನಿಗಮಗಳ ನೌಕರರು ವೇತನ ಹೆಚ್ಚಳದ ಬೇಡಿಕೆ ಸಡಿಲಿಸಲು ಸಮ್ಮತಿಸದೆ ಪಟ್ಟು ಹಿಡಿದ ಕಾರಣ ಒಮ್ಮತಕ್ಕೆ ಬರುವಲ್ಲಿ ಸಭೆ ವಿಫಲವಾಗಿದೆ. ಹೀಗಾಗಿ ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ. ಅನ್ಬುಕುಮಾರ್ ಗುರುವಾರ ಬೆಳಿಗ್ಗೆ 10 ಗಂಟೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲು ನಿರ್ಧರಿಸಿದ್ದಾರೆ.
ಸಾರಿಗೆ ನೌಕರರು ಶೇಕಡಾ 22ರ ವೇತನ ಹೆಚ್ಚಳಕ್ಕೆ ಪಟ್ಟು ಹಿಡಿದಿದ್ದಾರೆ. ಕಲ್ಯಾಣ ಕರ್ನಾಟಕ ಸಾರಿಗೆ (KKRTC), ವಾಯುವ್ಯ ಸಾರಿಗೆ (NWKRTC) ಎಂಡಿಗಳು ವರ್ಚುವಲ್ ಆಗಿ ಸಭೆಯಲ್ಲಿ ಭಾಗವಹಿಸಿದರು. ಉಳಿದಂತೆ ಅನ್ಬು ಕುಮಾರ್ ಮತ್ತು ಬಿಎಂಟಿಸಿ ಎಂಡಿ ಜಿ. ಸತ್ಯವತಿ ಮತ್ತು ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾದರು. ಯೂನಿಯನ್ ನಾಯಕರೂ ಸಹ ಸಾರಿಗೆ ಅಧಿಕಾರಿಗಳ ಜೊತೆ ಸಭೆಯಲ್ಲಿ ಭಾಗಿಯಾದರು. ಸತತ 4 ಗಂಟೆ ಸಭೆ ನಡೆಸಲಾಗಿದ್ದು ಒಮ್ಮತಕ್ಕೆ ಬರುವುದು ಸಾಧ್ಯವಾಗಿಲ್ಲ.
ನೌಕರರ ಸಮಸ್ಯೆಯನ್ನು ಶೀಘ್ರ ಬಗೆಹರಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಖಡಕ್ ಸೂಚನೆ ನೀಡಿದ್ದರು. ಇದರ ಬೆನ್ನಲ್ಲೇ ಮಹತ್ವದ ಸಭೆ ನಡೆದಿದೆ.
ಇದನ್ನೂ ಓದಿ: ಪ್ರಯಾಣಿಕರಿಗೆ ಶಾಕ್: ಮಾ. 21ರಿಂದ ಸಾರಿಗೆ ನೌಕರರ ಮುಷ್ಕರ, ರಸ್ತೆಗೆ ಇಳಿಯಲ್ಲ KSRTC ಬಸ್ಗಳು
ಮಾರ್ಚ್ 21 ರಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ ಮಾಡಲು ನಿರ್ಧರಿಸಿರುವುದಾಗಿ ಕೆಎಸ್ಆರ್ಟಿಸಿ ನೌಕರರು ಘೋಷಿಸಿದ್ದರು. ಈ ಮುಷ್ಕರಕ್ಕೆ 4 ನಿಗಮಗಳ ನೌಕರರು ಬೆಂಬಲ ವ್ಯಕ್ತಪಡಿಸಿದ್ದು, ಅಂದಿನಿಂದ 23,000 ಕೆಎಸ್ಆರ್ಟಿಸಿ ಬಸ್ಗಳು ರಸ್ತೆಗೆ ಇಳಿಯುವುದಿಲ್ಲ ಎಂದು ಸಾರಿಗೆ ನೌಕರರ ಸಂಘ ಹೇಳಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸಾರಿಗೆ ಸಚಿವ ಬಿ. ಶ್ರೀರಾಮುಲು ನಮ್ಮ ಎಲ್ಲ ಬೇಡಿಕೆಗಳನ್ನು ಈಡೇರಿಸುತ್ತೇವೆ ಎಂದು ಈ ಹಿಂದೆ ನಡೆದ ಹಲವು ಸಭೆಗಳಲ್ಲಿ ಹೇಳಿದ್ದರು. ಆದರೆ ಈವರೆಗೂ ಬೇಡಿಕೆಗಳನ್ನು ಈಡೇರಿಸಿಲ್ಲ. ಇತ್ತೀಚಿಗೆ ಸರ್ಕಾರಿ ನೌಕರರು, ವೇತನ ಹೆಚ್ಚಳ ಸಂಬಂಧ ಪ್ರತಿಭಟನೆ ಮಾಡಿದ ವೇಳೆ ಸಿಎಂ ಬೊಮ್ಮಾಯಿ ಶೇ 17 ರಷ್ಟು ವೇತನ ಹೆಚ್ಚಳ ಮಾಡಿ ಆದೇಶ ಹೊರಡಿಸಿದ್ದರು. ಆದರೆ ನಾವು ಇಷ್ಟು ವರ್ಷಗಳಿಂದ ಪ್ರಭಟನೆ ನಡೆಸುತ್ತಿದ್ದರೂ, ಗಮನ ಹರಿಸುತ್ತಿಲ್ಲ. ಅವರು ಕೇವಲ ಶೇ 10 ರಷ್ಟು ಮಾತ್ರ ವೇತನ ಹೆಚ್ಚಿಸುವ ಭರವಸೆ ನೀಡಿದ್ದಾರೆ. ನಾವು ಅದನ್ನು ತಿರಸ್ಕರಿಸಿದ್ದೇವೆ ಎಂದು ಸಾರಿಗೆ ನೌಕರರ ಸಂಘದ ಅಧ್ಯಕ್ಷ ಹೆಚ್.ವಿ. ಅನಂತ ಸುಬ್ಬರಾವ್ ಹೇಳಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ