3.5 C
Munich
Monday, March 27, 2023

Mahesh Bhatt Called Rajamouli A Wizard, Here Is A Writeup Of Mahesh Bhatt About Rajamouli | ರಾಜಮೌಳಿ ಏಕೆ ವಿಶೇಷ? ಬಾಲಿವುಡ್ ನಿರ್ದೇಶಕ ಮಹೇಶ್ ಭಟ್ ವಿಶ್ಲೇಷಣೆ

ಓದಲೇಬೇಕು

ನಿರ್ದೇಶಕ ರಾಜಮೌಳಿ ಬಗ್ಗೆ ಬಾಲಿವುಡ್ ಹಿರಿಯ ನಿರ್ದೇಶಕ, ನಿರ್ಮಾಪಕ ಮಹೇಶ್ ಭಟ್ ಬರೆದಿರುವ ಲೇಖನ ಇಲ್ಲಿದೆ. ರಾಜಮೌಳಿ ಏಕೆ ವಿಶೇಷ ಎಂಬ ಬಗ್ಗೆ ಮಹೇಶ್ ಭಟ್ ಬೆಳಕು ಚೆಲ್ಲಿದ್ದಾರೆ.

ಮಹೇಶ್ ಭಟ್-ರಾಜಮೌಳಿ

ನಿರ್ದೇಶಕ ರಾಜಮೌಳಿ ಕುರಿತು ಮಹೇಶ್ ಭಟ್ ಲೇಖನ. ಮಹೇಶ್ ಭಟ್ ಬಾಲಿವುಡ್​ನ ಹಿರಿಯ ನಿರ್ದೇಶಕ ಹಾಗೂ ನಿರ್ಮಾಪಕ.

ರಾಜಮೌಳಿ (Rajamouli) ದೇಶದ ಅನರ್ಘ್ಯ ನಿಧಿ. ನಿಸ್ಸಂಶಯವಾಗಿ ಭಾರತೀಯ ಸಿನಿಮಾವನ್ನು ಜಗತ್ತಿಗೆ ಪರಿಚಯಿಸಿದ ಶ್ರೇಯ ಅವರಿಗೆ ಸಲ್ಲುತ್ತದೆ. ‘ಬಾಹುಬಲಿ ಪಾರ್ಟ್ 1’ ಮೂಲಕ ಎಲ್ಲರನ್ನೂ ಚಕಿತಗೊಳಿಸಿದ್ದ ರಾಜಮೌಳಿ ಬಾಹುಬಲಿ 2 ಅನ್ನು ಅದಕ್ಕಿಂತಲೂ ಅದ್ಭುತವಾಗಿ ತೆರೆಗೆ ತಂದರು. ಈ ಅದ್ಭುತ ಸಿನಿಮಾ ನಿರ್ದೇಶಕನ ಪ್ರತಿಭೆ, ಕತೆ ಹೇಳುವ ಶಕ್ತ ಶೈಲಿಯ ಕಡೆಗೆ ವಿಶ್ವ ಸಿನಿಮಾ ರಂಗ ಈಗ ಕಣ್ಣರಳಿಸಿದೆ, ಅವಾಕ್ಕಾಗಿ ನೋಡುತ್ತಿದೆ.

ಜೇಮ್ಸ್ ಕ್ಯಾಮರನ್ ಜೊತೆ ರಾಜಮೌಳಿ ಮಾತನಾಡುತ್ತಿರುವ ವಿಡಿಯೋ ನೋಡಿದ ಮೇಲೆ ನನಗೆ ಅನಿಸಿದ್ದೆಂದರೆ ರಾಜಮೌಳಿ ತಮ್ಮ ಪೂರ್ಣ ಪ್ರತಿಭೆಯನ್ನು ಇನ್ನೂ ಬಳಸಿಲ್ಲ. ಮಹಾನ್ ಕನಸುಗಾರ, ದೈತ್ಯ ಸಿನಿಮಾ ಮೇಕರ್ ಜೇಮ್ಸ್ ಕ್ಯಾಮರನ್ ಅವರ ಪ್ರತಿಭೆಯ ಹತ್ತಿರಕ್ಕೂ ಹೋಗಲಾರದ ಅಭಿವೃದ್ಧಿಯ ಹಾದಿಯಲ್ಲಿರುವ ದೇಶಗಳ ಅಥವಾ ದಕ್ಷಿಣ ಏಷ್ಯಾದ ಸಿನಿಮಾ ಕರ್ಮಿಗಳ ರೀತಿ ರಾಜಮೌಳಿ ಅಂದು ವರ್ತಿಸಲಿಲ್ಲ. ರಾಜಮೌಳಿ ಅಂದು ಆತ್ಮವಿಶ್ವಾಸದಿಂದಿದ್ದರು, ಈ ಅಂಶವೇ ನನಗೆ ರಾಜಮೌಳಿಯ ಬಗ್ಗೆ ಬಹಳ ಹಿಡಿಸುತ್ತದೆ.

ಯಾವಾಗಲೂ ಸಿನಿಮಾವನ್ನು ಎರಡು ರೀತಿಯಲ್ಲಿ ಅರ್ಥಮಾಡಿಕೊಳ್ಳಲಾಗುತ್ತದೆ. ಸಿನಿಮಾ ಎಂದರೆ ಅದೊಂದು ಮನೊರಂಜನೆ,  ಅದೊಂದು ಹಬ್ಬ, ಅದನ್ನು ಆಚರಿಸಬೇಕು ಎಂದುಕೊಂಡವರು ಒಂದು ಕಡೆ. ಆದರೆ ಇನ್ನೊಂದು ರೀತಿಯವರಿರುತ್ತಾರೆ ಅದೇ ಮಾದರಿಯನ್ನು ನೋಡುತ್ತಾ ನಾವು ಬೆಳೆದಿದ್ದೇವೆ, ಅದನ್ನು ವಿ ಶಾಂತಾರಾಮ್ ಶೈಲಿ ಎನ್ನಬಹುದು. ಅವರಿಗೆ ಸಿನಿಮಾ ಎಂದರೆ ಅದು ಧ್ಯಾನ, ಪ್ರಾರ್ಥನೆ. ಇದೇ ಕಾರಣಕ್ಕೆ ಶಾಂತಾರಾಮ್ ಅವರ ಸ್ಟುಡಿಯೋಕ್ಕೆ ಕಲಾಮಂದಿರ್ ಎಂಬ ಹೆಸರು. ಸಿನಿಮಾವನ್ನು ಮನೊರಂಜನೆ ಎಂದುಕೊಂಡಿದ್ದ ಆರ್​ಕೆ ಸ್ಟುಡಿಯೋಗಿಂತಲೂ ಅದು ಬಹಳ ಭಿನ್ನವಾಗಿತ್ತು. ಆದರೆ ರಾಜಮೌಳಿಯ ಸಿನಿಮಾ ಮಾದರಿಯನ್ನು ನಾನು ಸಾಧನಾ (ತಪಸ್ಸು, ಕಠಿಣ ಪೂಜೆ) ಎನ್ನುತ್ತೇನೆ. ರಾಜಮೌಳಿ ತನ್ನ ಯೋಚನೆ, ಬರಹ, ಪ್ರತಿಭೆಗಳನ್ನೆಲ್ಲ ಒಗ್ಗೂಡಿಸಿ ಒಂದು ಅದ್ಭುತವಾದ ಉತ್ಪನ್ನವನ್ನು ನೀಡುವ ಮೂಲಕ ಯಾವುದೋ ಶಕ್ತಿಯನ್ನು ಮೆಚ್ಚಿಸಲು ಯತ್ನಿಸುತ್ತಿದ್ದಾರೆ ಎಂಬಂತೆ ಭಾಸವಾಗುತ್ತದೆ.

ದಕ್ಷಿಣದ ಹಲವು ನಿರ್ದೇಶಕರು, ಸಿನಿಮಾ ಕರ್ಮಿಗಳು ಉತ್ತರ ಭಾರತದ ಸಿನಿ ಪ್ರೇಮಿಗಳ ಹೃದಯ ಗೆಲ್ಲಲು ರಾಜಮೌಳಿ ದಾರಿ ಮಾಡಿಕೊಟ್ಟರು. ರಾಜಮೌಳಿ ಇಡೀ ದೇಶವನ್ನು ಒಂದು ಮಾಡಿದರು ಮಾತ್ರವಲ್ಲ ಅಂತರಾಷ್ಟ್ರೀಯ ಮಟ್ಟದಲ್ಲೂ ಭಾರತಕ್ಕೆ ಗುರುತು ಒದಗಿಸಿದರು. ಇತ್ತೀಚೆಗೆ ನನ್ನ ಹಾಲಿವುಡ್ ಗೆಳೆಯನೊಟ್ಟಿಗೆ ಮಾತನಾಡುತ್ತಿದ್ದೆ. ಆತನ ಪತ್ನಿ ಸಿನಿಮಾ ಎಡಿಟರ್, ಆಕೆ ಆರ್​ಆರ್​ಆರ್ ಸಿನಿಮಾ ನೋಡಿದರಂತೆ, ನೋಡಿದಾಗಿನಿಂದಲೂ ಸಿನಿಮಾ ಬಗ್ಗೆ ಮಾತನಾಡುವುದನ್ನೇ ನಿಲ್ಲಿಸುತ್ತಿಲ್ಲ ಎಂದ ಆತ. ಭಾರತದ ಸಿನಿಮಾಗಳು ಹೀಗೆ ಹೊರ ದೇಶಗಳ ಹೃದಯ ಮೆದುಳು ಹೊಕ್ಕಿವೆಯೆಂದಾದರೆ ರಾಜಮೌಳಿ ಮಾಡಿರುವ ಮೋಡಿ ಸಾಮಾನ್ಯದ್ದಲ್ಲ.

ಇದನ್ನೂ ಓದಿ: ರಾಮ್​ ಗೋಪಾಲ್​ ವರ್ಮಾ ಕಂಡಂತೆ ರಾಜಮೌಳಿ; ಸಿನಿ ಮಾಂತ್ರಿಕನ ಬಗ್ಗೆ ಆರ್​ಜಿವಿ ಬರೆದ ವಿಶೇಷ ಲೇಖನ..

ಈಗ ನೋಡಿ, ಎಂಎಂ ಕೀರವಾಣಿಯ ಸಂಗೀತ ವಿಶ್ವವನ್ನೇ ಕುಣಿಸುತ್ತಿದೆ. ಗೋಲ್ಡನ್ ಗ್ಲೋಬ್, ಆಸ್ಕರ್ ಎಲ್ಲವನ್ನೂ ಗೆದ್ದಿದೆ. ಈ ಅಭೂತಪೂರ್ವ ಘಟನೆಯನ್ನು ನಾನು ಜೀವನಮಾನದಲ್ಲೆ ಮರೆಯಲಾರೆ. ಭಾರತದ ಸಿನಿಮಾ ಮೇಕರ್​ಗಳು ಹೀಗೆ ಬಾಕ್ಸ್ ಆಫೀಸ್ ಸಕ್ಸಸ್ ನೀಡುವ ಜೊತೆಗೆ ಕೋಟ್ಯಂತರ ಜನರಿಗೆ ಸ್ಪೂರ್ತಿ ನೀಡುವ ಹೊಸ ಹಾದಿಗಳನ್ನು ಹಾಕಿಕೊಡುವ ಈ ಕಾರ್ಯ ರಾಜಮೌಳಿಯನ್ನು ವಿಶ್ವ ಸಿನಿಮಾ ದಿಗ್ಗಜರಿಗಿಂತಲೂ ಎತ್ತರದಲ್ಲಿ ನಿಲ್ಲಿಸುತ್ತದೆ. ಅವರು ಈಗಾಗಲೇ ಎಲ್ಲ ಗಡಿಗಳನ್ನು ದಾಟಿದ್ದಾರೆ. ವಿಶೇಷವೆಂದರೆ ಅವರು ತಮ್ಮತನವನ್ನು ಬಿಟ್ಟುಕೊಡದೇ ಗಡಿಗಳನ್ನು ದಾಟಿ ಮಹಾನ್ ಎನಿಸಿಕೊಂಡಿದ್ದಾರೆ. ಇರಾನಿಯನ್ ಸಿನಿಮಾಗಳು ಏಕೆ ಹಿಟ್ ಎನಿಸಿಕೊಂಡವು? ಟರ್ಕಿ ಸಿನಿಮಾಗಳು ಏಕೆ ಅಷ್ಟು ಜನಮನ್ನಣೆ ಪಡೆದವು? ಕೊರಿಯನ್ ಸಿನಿಮಾಗಳೇಕೆ ಇಷ್ಟು ಜನಪ್ರಿಯವಾಗಿವೆ? ಅವ್ಯಾವುವೂ ಸಹ ತಮ್ಮ ತನವನ್ನು ಬಿಟ್ಟುಕೊಟ್ಟಿರಲಿಲ್ಲ. ಹಾಗೆಯೇ ರಾಜಮೌಳಿ ಸಹ ತಮ್ಮ ಮೂಲ ಸಂಸ್ಕೃತಿಯ ಬೇರುಗಳಿಗೆ ಅಂಟಿಕೊಂಡು ಆ ಸಂಸ್ಕೃತಿಯ ವೈವಿಧ್ಯತೆಯನ್ನು ಸಿನಿಮಾಗಳ ಮೂಲಕ ವಿಶ್ವಕ್ಕೆ ಹೇಳುತ್ತಿದ್ದಾರೆ.

ರಾಜಮೌಳಿಗೆ ಭಾರತೀಯರ ಎಮೋಷನ್ಸ್ ಗೊತ್ತಿದೆ ಜೊತೆಗೆ ವಿಶ್ವದ ಅತ್ಯುತ್ತಮ ಸಿನಿಮಾ ತಂತ್ರಜ್ಞಾನದ ಬಗ್ಗೆಯೂ ಮಾಹಿತಿ ಇದೆ. ರಾಜಮೌಳಿ ಭಾರತೀಯ ಸಿನಿಮಾಕ್ಕೆ ಸಿಕ್ಕಿರುವ ಅದ್ಭುತ ಉಡುಗೊರೆ ನಾವು ಅವರನ್ನು ಉಳಿಸಿಕೊಳ್ಳಬೇಕು, ಅವರನ್ನು ಗೌರವಿಸಬೇಕು, ಸೆಲೆಬ್ರೇಟ್ ಮಾಡಬೇಕು. ಭಾರತವನ್ನು ಮತ್ತೆ ಭಾರತೀಯ ಸಿನಿಮಾಕ್ಕೆ ಪರಿಚಯಿಸಿದ ಶ್ರೇಯ ರಾಜಮೌಳಿಗೆ ಸಲ್ಲಿಸಬೇಕು. ಅವರ ಸಿನಿಮಾಗಳಲ್ಲಿ ದೊಡ್ಡ ಸ್ಟಾರ್​ಗಳಿರುತ್ತಾರೆ ಎಂದು ಕೆಲವರು ಹೇಳುತ್ತಾರೆ. ಇರಬಹುದು ಆದರೆ ರಾಜಮೌಳಿ ಕತೆ ಹೇಳಲು ಸ್ಟಾರ್​ಗಳ ಮೇಲೆ ಅವಲಂಬಿತವಾಗಿಲ್ಲ. ತನ್ನ ಪಾತ್ರಗಳಿಗೆ ಹೊಂದಿಕೆ ಆಗುತ್ತಾರೆಂಬ ಕಾರಣಕ್ಕೆ ಆ ನಟರನ್ನು ರಾಜಮೌಳಿ ಆಯ್ಕೆ ಮಾಡಿಕೊಳ್ಳುತ್ತಾರೆ. ಜಪಾನಿನಲ್ಲಿ, ಅಮೆರಿಕದಲ್ಲಿ, ಚೀನಾದಲ್ಲಿರುವವರಿಗೆ ಅವರು ಸ್ಟಾರ್​ಗಳಲ್ಲ ಅವರು ಪಾತ್ರಗಳಷ್ಟೆ ಆದರೆ ಅಲ್ಲಿಯೂ ಜನ ಹುಚ್ಚೆದ್ದು ರಾಜಮೌಳಿಯ ಸಿನಿಮಾ ನೋಡುತ್ತಾರೆ. ನಾಟು-ನಾಟು ಹಾಡಿಗೆ ಕುಣಿಯುತ್ತಾರೆ.

ರಾಜಮೌಳಿ ಒಬ್ಬ ಅದ್ಭುತ ಜಾದೂಗಾರ. ಮಕ್ಕಳು ತದೇಕಚಿತ್ತದಿಂದ ಮುಂದೇನಾಗುತ್ತದೆಯೋ ಎಂದು ಮ್ಯಾಜಿಕ್ ಶೋ ಒಂದನ್ನು ನೋಡುವಂತೆ ಪ್ರೇಕ್ಷಕ ತೆರೆಯನ್ನು ನೋಡುತ್ತಾ ಕೂರುವಂತೆ ಮಾಡಬಲ್ಲ ಅಪೂರ್ವ ಮೋಡಿಗಾರ. ತಮ್ಮ ಸಿನಿಮಾಗಳ ಮೂಲಕ ಇಡೀ ದೇಶವೇ ಪುಳಕಗೊಳ್ಳುವಂತೆ ರಾಜಮೌಳಿ ಮಾಡಿದ್ದಾರೆ. ದೇಶ ಮಾತ್ರವಲ್ಲ ಇಡೀ ವೀಶ್ವವೇ ಪುಳಕಗೊಳ್ಳುವಂತೆ ಮಾಡಿದ್ದಾರೆ. ರಾಜಮೌಳಿಯನ್ನು ಮಾಂತ್ರಿಕ ಎಂದು ನಾನು ಕರೆಯುತ್ತೇನೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!