ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಂತೆಯೇ ರಾಜ್ಯಕ್ಕೆ ಪದೇ ಪದೇ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಮಾರ್ಚ್ 25ರಂದು ಮತ್ತೊಮ್ಮೆ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ.
Image Credit source: opindia.com
ಬೆಂಗಳೂರು: ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಂತೆಯೇ ರಾಜ್ಯಕ್ಕೆ ಪದೇ ಪದೇ ಆಗಮಿಸಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ಮಾರ್ಚ್ 25ರಂದು ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ದಾವಣಗೆರೆ ಹೊರವಲಯದ ಜಿಎಂಐಟಿ ಕಾಲೇಜು ಬಳಿ ನಡೆಯಲಿರುವ ಬಿಜೆಪಿ ಅಭಿಯಾನವಾದ ವಿಜಯಸಂಕಲ್ಪ ಯಾತ್ರೆಯ (Vijay Sankalpa Yatra) ಸಮಾರೋಪ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಸುಮಾರು 400 ಎಕರೆ ಪ್ರದೇಶದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, 10 ಲಕ್ಷ ಜನ ಸೇರಿಸುವ ನಿರೀಕ್ಷೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಸದ್ಯ ಸಮಾವೇಶಕ್ಕೆ ಭರ್ಜರಿಯಾಗಿ ಸಿದ್ಧತೆ ನಡೆಯುತ್ತಿದ್ದು, 30ಕ್ಕೂ ಹೆಚ್ಚು ಜೆಸಿಬಿಗಳಿಂದ ಸಮಾವೇಶ ಸ್ಥಳದಲ್ಲಿ ಸ್ವಚ್ಛತಾ ಕಾರ್ಯ ಮಾಡಲಾಗಿದೆ. ಕಾಂಗ್ರೆಸ್ನ ಸಿದ್ದರಾಮೋತ್ಸವಕ್ಕೆ ಸೆಡ್ಡು ಹೊಡೆಯುವ ನಿಟ್ಟಿನಲ್ಲಿ ಬಿಜೆಪಿ ಈ ಸಮಾವೇಶವನ್ನು ಬಳಸಿಕೊಳ್ಳಲಿದೆ ಎನ್ನಲಾಗುತ್ತಿದೆ.
ಪ್ರಧಾನಿ ಮೋದಿ ಭೇಟಿ ವಿವರ ಹೀಗಿದೆ:
- ಮಾ.25ರಂದು ಬೆಳಗ್ಗೆ 10.10ಕ್ಕೆ HAL ಏರ್‌ಪೋರ್ಟ್‌ಗೆ ಆಗಮನ
- ಹೆಚ್‌ಎಎಲ್‌ನಿಂದ ಹೆಲಿಕಾಪ್ಟರ್ ಮೂಲಕ ಚಿಕ್ಕಬಳ್ಳಾಪುರಕ್ಕೆ ಪ್ರಯಾಣ
- ಬೆಳಗ್ಗೆ 10.35ಕ್ಕೆ ಚಿಕ್ಕಬಳ್ಳಾಪುರಕ್ಕೆ ಪ್ರಧಾನಿ ಮೋದಿ ತಲುಪಲಿದ್ದಾರೆ
- ಚಿಕ್ಕಬಳ್ಳಾಪುರದಲ್ಲಿ ಬೆಳಗ್ಗೆ 10.45ಕ್ಕೆ ವೈದ್ಯಕೀಯ ಸಂಸ್ಧೆ ಉದ್ಘಾಟನೆ
- ಮಧುಸೂದನ್ ಸಾಯಿ ವೈದ್ಯಕೀಯ ವಿಜ್ಞಾನ, ಸಂಶೋಧನಾ ಸಂಸ್ಥೆ
- ಮಧ್ಯಾಹ್ನ 12.55ಕ್ಕೆ ವೈಟ್‌ಫೀಲ್ಡ್ ಮೆಟ್ರೋ ನಿಲ್ದಾಣಕ್ಕೆ ಮೋದಿ ಆಗಮನ
- ಮಧ್ಯಾಹ್ನ 1 ಗಂಟೆಗೆ ವೈಟ್‌ಫೀಲ್ಡ್ ಮೆಟ್ರೋ ಹೊಸ ಮಾರ್ಗ ಉದ್ಘಾಟನೆ
- ಉದ್ಘಾಟನೆ ಬಳಿಕ ಮೆಟ್ರೋದಲ್ಲಿ ಮೋದಿ ಪ್ರಯಾಣ
- ಮಧ್ಯಾಹ್ನ 1.50ಕ್ಕೆ ಕಾಪ್ಟರ್‌ನಲ್ಲಿ ಬೆಂಗಳೂರಿಂದ ದಾವಣಗೆರೆಗೆ ಪ್ರಯಾಣ
- ಮಧ್ಯಾಹ್ನ 3.30ಕ್ಕೆ ದಾವಣಗೆರೆಯಲ್ಲಿ ಸಾರ್ವಜನಿಕ ಸಮಾವೇಶದಲ್ಲಿ ಭಾಗಿ
- ಸಂಜೆ 5.15ಕ್ಕೆ ಕಾಪ್ಟರ್‌ನಲ್ಲಿ ದಾವಣಗೆರೆಯಿಂದ ಶಿವಮೊಗ್ಗಕ್ಕೆ ಪ್ರಯಾಣ
- ಸಂಜೆ 5.55ಕ್ಕೆ ಶಿವಮೊಗ್ಗ ವಿಮಾನ ನಿಲ್ದಾಣದಿಂದ ನವದೆಹಲಿಗೆ ನಿರ್ಗಮನ
ವಿಜಯಸಂಕಲ್ಪ ಯಾತ್ರೆಯ ಸಮಾರೋಪ ಕಾರ್ಯಕ್ರಮದ ಬೆನ್ನಲ್ಲೇ ಚುನಾವಣೆ ಘೋಷಣೆಯಾಗುವ ಸಾಧ್ಯತೆಯೂ ಇದೆ ಎಂದು ಮೂಲಗಳು ತಿಳಿಸಿವೆ. ಕೇಂದ್ರ ಚುನಾವಣಾ ಆಯೋಗದ ನಿಯೋಗ ಈಗಾಗಲೇ ರಾಜ್ಯ ಭೇಟಿ ಮುಕ್ತಾಯಗೊಳಿಸಿದ್ದು, ಚುನಾವಣೆ ಸಿದ್ಧತೆಗಳ ಬಗ್ಗೆ ಮಾಹಿತಿ ನೀಡಿದೆ.
ಇದನ್ನೂ ಓದಿ: Siddaramaiah: ಮಾಜಿ ಸಿಎಂ ಸಿದ್ದರಾಮಯ್ಯ ವರುಣ ಕ್ಷೇತ್ರದಿಂದ ಸ್ಪರ್ಧೆ ಬಹುತೇಕ ಖಚಿತ
ಪರೀಕ್ಷೆ, ಹಬ್ಬಗಳು ಇತ್ಯಾದಿ ವಿಚಾರಗಳ ಬಗ್ಗೆ ಸಮಾಲೋಚನೆ ನಡೆಸಿಯೇ ನಾವು ಚುನಾವಣೆ ದಿನಾಂಕ ನಿಗದಿಪಡಿಸುತ್ತೇವೆ. ಒಂದೇ ಹಂತದಲ್ಲಿ ಚುನಾವಣೆ ಮಾಡುವ ಬಗ್ಗೆ ರಾಜಕೀಯ ಪಕ್ಷಗಳು ಮನವಿ ಮಾಡಿವೆ. ಎಲ್ಲದರ ಬಗ್ಗೆಯೂ ವಿಮರ್ಶೆ ಮಾಡುತ್ತೇವೆ ಎಂದು ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ತಿಳಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.