ಸ್ಟಾರ್ ನಟ ರಾಮ್ ಚರಣ್, ತಮಗೆ ಬಹುವಾಗಿ ಇಷ್ಟವಾಗು ತೆಲುಗು ಹಾಗೂ ಇಂಗ್ಲೀಷ್ ಸಿನಿಮಾಗಳ ಹೆಸರು ಹೇಳಿದ್ದಾರೆ. ಒಂದು ಹಿಂದಿ ಸಿನಿಮಾ ಸಹ ಅವರಿಗೆ ಬಹಳ ಇಷ್ಟವಂತೆ.
ರಾಮ್ ಚರಣ್
ಸಾಮಾನ್ಯ ಸಿನಿಮಾ ಪ್ರೇಕ್ಷಕರು ಹಾಗೂ ಚಿತ್ರಕರ್ಮಿಗಳು ಸಿನಿಮಾ ವೀಕ್ಷಿಸುವ ವಿಧಾನದಲ್ಲಿ ದೊಡ್ಡ ಅಂತರ ಇದೆ. ಸಾಮಾನ್ಯ ಪ್ರೇಕ್ಷಕ, ಸ್ಟಾರ್ ನಟ, ನಟಿ, ಹಾಡು, ಫೈಟ್ ಇನ್ನಿತರೆ ಅಂಶಗಳನ್ನು ಗಮನಿಸಿದರೆ ಸಿನಿಮಾ ಮಂದಿ ಸಿನಿಮಾಗಳಲ್ಲಿ ಬೇರೆಯದ್ದನ್ನೇ ಕಾಣುತ್ತಾರೆ ಮತ್ತು ಗಮನಿಸುತ್ತಾರೆ. ಹಾಗಾಗಿ ಸಿನಿಮಾ ಮಂದಿಗೆ ಅದರಲ್ಲಿಯೂ ಸ್ಟಾರ್ ನಿರ್ದೇಶಕ, ನಟರಿಗೆ ಸ್ಪೂರ್ತಿಯಾದ ಸಿನಿಮಾಗಳು ಯಾವುವು? ಅವರಿಗೆ ಯಾವ ರೀತಿಯ ಸಿನಿಮಾಗಳು ಇಷ್ಟ ಎಂಬುದು ಹಲವರ ಕುತೂಹಲ. ಇದೀಗ ಸ್ಟಾರ್ ನಟ ರಾಮ್ ಚರಣ್ (Ram Charan) ತಮಗೆ ಬಹಳ ಇಷ್ಟವಾದ ಕೆಲವು ತೆಲುಗು ಹಾಗೂ ಇಂಗ್ಲೀಷ್ ಸಿನಿಮಾಗಳನ್ನು ಹೆಸರಿಸಿದ್ದಾರೆ.
ಇತ್ತೀಚೆಗಿನ ಸಂದರ್ಶನ ಒಂದರಲ್ಲಿ ತಮ್ಮ ಇಷ್ಟದ ತೆಲುಗು ಸಿನಿಮಾಗಳು ಹಾಗೂ ಇಂಗ್ಲೀಷ್ ಸಿನಿಮಾಗಳ ಬಗ್ಗೆ ನಟ ರಾಮ್ ಚರಣ್ ಮಾತನಾಡಿದ್ದಾರೆ. ಭಾರತದ ಯಾವ ಸಿನಿಮಾಗಳು ಬಹು ಇಷ್ಟ ಎಂಬ ಪ್ರಶ್ನೆಗೆ, ತೆಲುಗಿನ ‘ದಾನ ವೀರ ಶೂರ ಕರ್ಣ’ ಸಿನಿಮಾ ನನಗೆ ಬಹಳ ಇಷ್ಟ. ಅದರ ಬಳಿಕ ರಾಜಮೌಳಿ ನಿರ್ದೇಶನದ ‘ಬಾಹುಬಲಿ 2’. ಅನಿಲ್ ಕಪೂರ್ ನಟನೆಯ ‘ಮಿಸ್ಟರ್ ಇಂಡಿಯಾ’ ಸಹ ನನ್ನ ಮೆಚ್ಚಿನ ಸಿನಿಮಾ. ನನ್ನದೇ ನಟನೆಯ ‘ರಂಗಸ್ಥಳಂ’ ಸಿನಿಮಾ ಸಹ ನನ್ನ ಬಹು ಮೆಚ್ಚಿನ ಸಿನಿಮಾ ಎಂದು ರಾಮ್ ಚರಣ್ ತೇಜ ಉತ್ತರಿಸಿದ್ದಾರೆ.
ಭಾರತದ ಸಿನಿಮಾಗಳ ಜೊತೆಗೆ ಇಂಗ್ಲೀಷ್ನ ಯಾವ ಸಿನಿಮಾಗಳು ಇಷ್ಟ ಎಂಬ ಪ್ರಶ್ನೆಗೂ ಉತ್ತರಿಸಿರುವ ರಾಮ್ ಚರಣ್, ಮೊದಲಿಗೆ ನಾನು ‘ದಿ ನೋಟ್ಬುಕ್’ ಸಿನಿಮಾದಿಂದ ಪಟ್ಟಿ ಪ್ರಾರಂಭ ಮಾಡಬೇಕು. ಅದರ ಬಳಿಕ ‘ಟರ್ಮಿನೇಟರ್ 2’ ನನಗೆ ಬಹಳ ಇಷ್ಟ. ಈ ಸಿನಿಮಾಗಳನ್ನು ಕನಿಷ್ಟ 50 ಬಾರಿಯಾದರೂ ನಾನು ನೋಡಿರುತ್ತೀನಿ ಎಂದಿರುವ ರಾಮ್ ಚರಣ್, ನಿರ್ದೇಶಕ ಕ್ವಿಂಟನ್ ಟೊರೆಂಟೀನೊ ನಿರ್ದೇಶನದ ಎಲ್ಲ ಸಿನಿಮಾಗಳು ಸಹ ನನಗೆ ಬಹಳ ಇಷ್ಟ. ಜೊತೆಗೆ ‘ಇಂಗ್ಲೋರಿಯಸ್ ಬಾಸ್ಟರ್ಡ್ಸ್’ ಸಿನಿಮಾ ಸಹ ನನಗೆ ಬಹಳ ಇಷ್ಟ ಎಂದಿದ್ದಾರೆ.
ರಾಮ್ ಚರಣ್ ಉತ್ತಮ ನಟನಾಗಿರುವ ಜೊತೆಗೆ ಒಳ್ಳೆಯ ಸಿನಿಮಾ ಪ್ರೇಮಿಯೂ ಹೌದು. ವಿಶ್ವ ಸಿನಿಮಾಗಳ ಬಗ್ಗೆ ಸಾಕಷ್ಟು ಆಸಕ್ತಿ ಅವರಿಗಿದೆ. ಹಲವು ಭಾಷೆಗಳ ಉತ್ತಮ ಸಿನಿಮಾಗಳನ್ನು ಹುಡುಕಿ ನೋಡುತ್ತಾರೆ ರಾಮ್ ಚರಣ್. ಈ ಬಗ್ಗೆ ಹಿಂದೊಮ್ಮೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.
ನಟ ರಾಮ್ ಚರಣ್ ನಟನೆಯ ಆರ್ಆರ್ಆರ್ ಸಿನಿಮಾ ಇದೀಗ ವಿಶ್ವಮಟ್ಟದಲ್ಲಿ ಸಿನಿಮಾ ಪ್ರೇಮಿಗಳನ್ನು ಸೆಳೆದಿದ್ದು, ತಮ್ಮ ಸಿನಿಮಾ ಅಮೆರಿಕದಲ್ಲಿ ಮರುಬಿಡುಗಡೆ ಆಗಿರುವ ಕಾರಣ ಅಲ್ಲಿ ಪ್ರಚಾರ ಕಾರ್ಯದಲ್ಲಿ ರಾಮ್ ಚರಣ್ ನಿರತರಾಗಿದ್ದಾರೆ. ಅಮೆರಿಕದ ಟಿವಿ ಸಂದರ್ಶನಗಳಲ್ಲಿ ಅಲ್ಲಿನ ಯೂಟ್ಯೂಬ್ ಕ್ರಿಯೇಟರ್ಗಳ ಸಂದರ್ಶನಗಳಲ್ಲಿ ಭಾಗವಹಿಸುತ್ತಿದ್ದಾರೆ.
ಆರ್ಆರ್ಆರ್ ಸಿನಿಮಾ ಸೂಪರ್ ಹಿಟ್ ಆಗಿರುವ ಬೆನ್ನಲ್ಲೆ ತಮ್ಮ ಮುಂದಿನ ಸಿನಿಮಾ ಬಗ್ಗೆ ಎಚ್ಚರಿಕೆ ವಹಿಸಿದ್ದಾರೆ ರಾಮ್ ಚರಣ್. ಇದೀಗ ತಮಿಳಿನ ಸ್ಟಾರ್ ನಟ ಶಂಕರ್ ನಿರ್ದೇಶನದ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಬಾಲಿವುಡ್ ಹಾಟ್ ನಟಿ ಕಿಯಾರಾ ಅಡ್ವಾಣಿ ನಾಯಕಿ. ನಟ ಸುನಿಲ್ ಸಹ ಸಿನಿಮಾದ ಪ್ರಧಾನ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ