ಅಮೆರಿಕದ ಹಲವು ನಗರಗಳಲ್ಲಿ ಆರ್ಆರ್ಆರ್ ಸಿನಿಮಾ ಮರುಬಿಡುಗಡೆ ಆಗಿದ್ದು ಸಿನಿಮಾ ನೋಡಲು ಜನ ಮುಗಿಬಿದ್ದಿದ್ದಾರೆ. 1647 ಸೀಟುಗಳು ವಿಶ್ವದ ದೊಡ್ಡ ಚಿತ್ರಮಂದಿರಗಳಲ್ಲೊಂದಾದ ಲಾಸ್ ಏಂಜಲ್ಸ್ನ ಏಸ್ ಥಿಯೇಟರ್ನ ಎಲ್ಲ ಟಿಕೆಟ್ಗಳು ಸೋಲ್ಡ್ ಔಟ್ ಆಗಿವೆ.
ಆರ್ಆರ್ಆರ್ ನೋಡಲು ಮುಗಿಬಿದ್ದ ಅಮೆರಿಕ ಜನ
ಆರ್ಆರ್ಆರ್ (RRR) ಸಿನಿಮಾ ಬಿಡುಗಡೆ ಆಗಿ ಇನ್ನಿಪ್ಪತ್ತು ದಿನಕ್ಕೆ ವರ್ಷವಾಗುತ್ತದೆ. ಆದರೂ ಸಿನಿಮಾದ ಕ್ರೇಜ್ ಕಡಿಮೆಯಾಗಿಲ್ಲ. ಇಂದಷ್ಟೆ ಅಮೆರಿಕದ (America) ಹಲವು ಪ್ರಮುಖ ನಗರಗಳಲ್ಲಿ ಸಿನಿಮಾ ಮರುಬಿಡುಗಡೆ ಆಗಿದ್ದು ಬಹುತೇಕ ಕಡೆ ಚಿತ್ರಮಂದಿರಗಳು (Theater) ಹೌಸ್ಫುಲ್ ಆಗಿವೆ. ಜನ ಉದ್ದನೆಯ ಸರತಿ ಸಾಲಿನಲ್ಲಿ ನಿಂತು ಟಿಕೆಟ್ ಖರೀದಿ ಮಾಡುತ್ತಿದ್ದಾರೆ. ಕೆಲವೆಡೆ ಆನ್ಲೈನ್ನಲ್ಲಿಯೇ ಟಿಕೆಟ್ಗಳು ಸೋಲ್ಡ್ ಔಟ್ ಆಗುತ್ತಿವೆ.
ಆರ್ಆರ್ಆರ್ ಸಿನಿಮಾದ ನಾಟು-ನಾಟು ಹಾಡು ಆಸ್ಕರ್ಗೆ (Oscar) ನಾಮಿನೇಟ್ ಆಗಿದ್ದು ಅದರ ಬೆನ್ನಲ್ಲೆ ಅಮೆರಿಕದ ಹಲವು ಕಡೆ ಸಿನಿಮಾವನ್ನು ಮರುಬಿಡುಗಡೆ ಮಾಡಲಾಗಿದೆ. ಲಾಸ್ ಏಂಜಲ್ಸ್ನ ಅತಿ ದೊಡ್ಡ ಚಿತ್ರಮಂದಿರ ಏಸ್ ಥಿಯೇಟರ್ನ ಎಲ್ಲ 1647 ಸೀಟುಗಳು ಭರ್ತಿಯಾಗಿದೆ. ಅಮೆರಿಕದ ಹಲವು ನಗರಗಳಲ್ಲಿ ಇದೇ ಪರಿಸ್ಥಿತಿ ಇದೆ.
ಅಮೆರಿಕದ ಜನ ಉದ್ದನೆಯ ಸರತಿ ಸಾಲಿನಲ್ಲಿ ನಿಂತು ಟಿಕೆಟ್ ಖರೀದಿಸುತ್ತಿದ್ದಾರೆ, ಚಿತ್ರಮಂದಿರದಲ್ಲಿ ನಾಟು-ನಾಟು ಹಾಡಿಗೆ ಕುಣಿದು ಕುಪ್ಪಳಿಸುತ್ತಿದ್ದಾರೆ. ತಮ್ಮ ಆರ್ಆರ್ಆರ್ ಸಿನಿಮಾಕ್ಕೆ ಅಮೆರಿಕ ಜನರಿಂದ ಸಿಗುತ್ತಿರುವ ಈ ಅಭೂತಪೂರ್ವ ಪ್ರತಿಕ್ರಿಯೆಯ ವಿಡಿಯೋಗಳನ್ನು ರಾಜಮೌಳಿಯ ಪುತ್ರ ಕಾರ್ತಿಕೇಯ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಮೆರಿಕದ ಹಲವು ಆರ್ಆರ್ಆರ್ ಅಭಿಮಾನಿಗಳು ತಾವು ಸಿನಿಮಾ ನೋಡುತ್ತಿರುವ ಚಿತ್ರಗಳನ್ನು, ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಸಂಭ್ರಮಿಸುತ್ತಿದ್ದಾರೆ.
RRR New Trailer: ಆರ್ಆರ್ಆರ್ ಹೊಸ ಟ್ರೈಲರ್ ಬಿಡುಗಡೆ, ಸಿನಿಮಾದಲ್ಲಿಲ್ಲದ ಕೆಲ ದೃಶ್ಯಗಳ ಸೇರ್ಪಡೆ
ಅಮೆರಿಕದ ಹಲವು ನಗರಗಳ ಸುಮಾರು 150 ಚಿತ್ರಮಂದಿರಗಳಲ್ಲಿ ಆರ್ಆರ್ಆರ್ ಸಿನಿಮಾ ಮರು ಬಿಡುಗಡೆ ಆಗಿದೆ. ಅತಿ ದೊಡ್ಡ ಚಿತ್ರಮಂದಿರದ ಲಾಸ್ ಏಂಜಲ್ಸ್ನ ಏಸ್ ಥಿಯೇಟರ್ನಲ್ಲಿ ಸ್ವತಃ ರಾಜಮೌಳಿ ಸಿನಿಮಾ ಪ್ರದರ್ಶನಕ್ಕೆ ಚಾಲನೆ ನೀಡಿದ್ದಾರೆ.
ಕಳೆದ ವರ್ಷ ಮಾರ್ಚ್ 25 ರಂದು ವಿಶ್ವದಾದ್ಯಂತ ಆರ್ಆರ್ಆರ್ ಸಿನಿಮಾ ಬಿಡುಗಡೆ ಆಗಿತ್ತು. ಆ ಸಮಯದಲ್ಲಿ ಸುಮಾರು 1000 ಕೋಟಿಗೂ ಹೆಚ್ಚು ಗಳಿಸಿತ್ತು. ಆದರೆ ಸಿನಿಮಾವು ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆ ಆದ ಬಳಿಕ ವಿದೇಶದಲ್ಲಿ ಬೇಡಿಕೆ ಹೆಚ್ಚಾಗಿ, ಜಪಾನ್ ಸೇರಿದಂತೆ ಹಲವು ದೇಶಗಳಲ್ಲಿ ಹೊಸದಾಗಿ ಬಿಡುಗಡೆ ಆಗಿ ಮತ್ತಷ್ಟು ಹಣ ಗಳಿಸಿತು. ಇದೀಗ ಅಮೆರಿಕದಲ್ಲಿ ಮರು ಬಿಡುಗಡೆ ಆಗಿದ್ದು, ಈಗಲೂ ಉತ್ತಮ ಕಲೆಕ್ಷನ್ ಅನ್ನು ಸಿನಿಮಾ ನಿರೀಕ್ಷಿಸುತ್ತಿದೆ.
ಆರ್ಆರ್ಆರ್ ಸಿನಿಮಾದಲ್ಲಿ ಮೊದಲ ಬಾರಿಗೆ ಜೂ ಎನ್ಟಿಆರ್ ಹಾಗೂ ರಾಮ್ ಚರಣ್ ತೇಜ ಒಟ್ಟಿಗೆ ನಟಿಸಿದ್ದು, ತೆಲುಗು ರಾಜ್ಯಗಳ ಐತಿಹಾಸಿಕ ಹೋರಾಟಗಾರರಾದ ಕೋಮರಂ ಭೀಮ್ ಹಾಗೂ ಅಲ್ಲೂರಿ ಸೀತಾರಾಮ ರಾಜು ಅವರ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇಬ್ಬರು ಹೋರಾಟಗಾರರ ಕುರಿತ ಕಾಲ್ಪನಿಕ ಕತೆ ಆರ್ಆರ್ಆರ್ ಸಿನಿಮಾ. ರಾಜಮೌಳಿ ನಿರ್ದೇಶನದ ಈ ಸಿನಿಮಾದಲ್ಲಿ ಆಲಿಯಾ ಭಟ್, ಅಜಯ್ ದೇವಗನ್ ಹಾಗೂ ಶ್ರಿಯಾ ಶಿರಿನ್ ಸಹ ನಟಿಸಿದ್ದಾರೆ. ಸಿನಿಮಾಕ್ಕೆ ಬಂಡವಾಳ ಹೂಡಿರುವುದು ಡಿವಿವಿ ದಯಾನಂದ್. ಸಿನಿಮಾಕ್ಕೆ ಕೀರವಾಣಿ ಸಂಗೀತ ನೀಡಿದ್ದು, ಗೋಲ್ಡನ್ ಗ್ಲೋಬ್ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಸಿನಿಮಾ ಬಾಚಿಕೊಂಡಿದ್ದು, ಸಿನಿಮಾದ ನಾಟು-ನಾಟು ಹಾಡು ಆಸ್ಕರ್ಗೆ ನಾಮಿನೇಟ್ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ