ರಾಜಾಜಿನಗರ ಕಾಂಗ್ರೆಸ್ ಟಿಕೇಟ್ ಆಕಾಂಕ್ಷಿಯಾಗಿದ್ದ ಎಸ್. ಮನೋಹರ್ ಸದ್ಯ ತಮ್ಮ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಎಸ್.ಮನೋಹರ್, ಸೋಮಣ್ಣ
ಬೆಂಗಳೂರು: ರಾಜಾಜಿನಗರ ಕಾಂಗ್ರೆಸ್ ಟಿಕೇಟ್ ಆಕಾಂಕ್ಷಿಯಾಗಿದ್ದ ಎಸ್. ಮನೋಹರ್ ಸದ್ಯ ತಮ್ಮ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜಾಜಿನಗರ ಕಾಂಗ್ರೆಸ್ ಅಭ್ಯರ್ಥಿಯಾಗಿ ವಿ. ಸೋಮಣ್ಣ (V Somanna) ಸ್ಪರ್ಧೆ ವದಂತಿ ಹಿನ್ನೆಲೆ ಎಸ್. ಮನೋಹರ್ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜನ ಖರ್ಗೆಗೆ ಪತ್ರ ಬರೆದು ರಾಜೀನಾಮೆ ನೀಡಿದ್ದಾರೆ. ತಮ್ಮ ವಿನೂತನ ಪ್ರತಿಭಟನೆಗಳ ಮೂಲಕ ಮನೋಹರ್ ಗಮನ ಸೆಳೆಯುತ್ತಿದ್ದರು. ಸಾಮಾನ್ಯ ಕಾರ್ಯಕರ್ತರನ್ನು ಪಕ್ಷ ಗೌರವಿಸುತ್ತಿಲ್ಲ. ಪಕ್ಷದಲ್ಲಿ ಅತಿ ಹೆಚ್ಚು ಹೋರಾಟ ಮಾಡಿದವರನ್ನು ಅವಮಾನಿಸಲಾಗುತ್ತಿದೆ. ಈ ಬೇಸರದಿಂದ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಹೇಳಿದ್ದಾರೆ.
ಅನ್ಯ ಪಕ್ಷದಿಂದ ಬರುವವರಿಗೆ ಮೊದಲ ಆದ್ಯತೆ ನೀಡಲಾಗುತ್ತಿದೆ. ಪಕ್ಷದ ಬಗ್ಗೆ ಅವಹೇಳಕಾರಿ ಮಾನಾಡಿದ್ದ ಕೆ.ಜಿ.ಎಫ್ ಬಾಬುನ ಮರಳಿ ಪಕ್ಷಕ್ಕೆ ಸೇರಿಸಿಕೊಂಡಿದ್ದು, ನಿಷ್ಠಾವಂತ ಕಾರ್ಯಕರ್ತರ ಕಡೆಗಣನೆ ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಾನು ಕಾಂಗ್ರೆಸ್ ಸೇರ್ಪಡೆ ಬಗ್ಗೆ ತೀರ್ಮಾನ ಮಾಡಿಲ್ಲ ಎಂದ ವಿ ಸೋಮಣ್ಣ
ಕರ್ನಾಟಕ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಸಚಿವ ವಿ ಸೋಮಣ್ಣ ಅವರಿಗೆ ಬಿಜೆಪಿ ಮೇಲೆ ಅಸಮಾಧಾನ ಉಂಟಾಗಿದ್ದು, ಮರಳಿ ಕಾಂಗ್ರೆಸ್ ಸೇರುತ್ತಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಸ್ಪಷ್ಟನೆ ನೀಡಿದ ಸಚಿವರು, ನಾನು ಕಾಂಗ್ರೆಸ್ ಸೇರ್ಪಡೆ ಬಗ್ಗೆ ತೀರ್ಮಾನ ಮಾಡಿಲ್ಲ ಎಂದಿದ್ದಾರೆ. ಜಿಲ್ಲೆಯ ಕನಕಪುರ ತಾಲೂಕಿನ ರಾಯಸಂದ್ರ ಗ್ರಾಮ ಮಾತನಾಡಿದ ಅವರು, ನಾನು ಕಾಂಗ್ರೆಸ್‌ಗೆ ಹೋಗುತ್ತೇನೆ ಅಂತ ನಿಮ್ಮ ಬಳಿ ಬಂದು ಹೇಳಿದ್ದೇನಾ? ನಾನು ಕಾಂಗ್ರೆಸ್‌ಗೆ ಹೋಗುತ್ತೇನೆಂದು ಎಲ್ಲಾದರೂ ಹೇಳಿದ್ದೇನಾ? ಒಳ ಹಂತದಲ್ಲಿ ಕೆಲವೊಂದು ಚರ್ಚೆ ಆಗುತ್ತಿರುತ್ತವೆ. ಈ ಬಗ್ಗೆ ಹೆಚ್ಚು ಒತ್ತು ನೀಡಬೇಡಿ ಎಂದು ಮನವಿ ಮಾಡಿದರು.
ನನಗೆ ನನ್ನದೇ ಆದ ನಿಬಂಧನೆಗಳಿವೆ
ನನಗೆ ನನ್ನದೇ ಆದ ನಿಬಂಧನೆಗಳಿವೆ, ನನ್ನದೇ ಆದ ನಿರ್ಧಾರ, ಅನುಭವಗಳಿವೆ. ನಾನು ಹಳ್ಳಿಯಿಂದ ಬಂದವನು, ಸುಮಾರು 45 ವರ್ಷಗಳ ಕಾಲ ಮಣ್ಣು ಹೊತ್ತಿದ್ದೇನೆ. ಕೆಲಸವನ್ನ ದೇವರಾಗಿ ನೋಡಿದ್ದೇನೆ. ನನಗೆ ಯಾಕೆ ಅಷ್ಟು ಧೈರ್ಯ ಅಂದರೆ ಒಂದು ಸಣ್ಣ ಅಪಚಾರ ಆಗಲು ಬಿಟ್ಟಿಲ್ಲ. ನಾನು ಬೆಂಗಳೂರಿಗೆ ಬಂದಿದ್ದು ಹೊಟ್ಟೆ ಪಾಡಿಗೆ. ಹೀಗಾಗಿ ನಮ್ಮ ಅನುಭವಕ್ಕೆ ತಕ್ಕಂತೆ ನೋವು ಇರುತ್ತದೆ. ಇದನ್ನು ಹೇಳಿಕೊಳ್ಳಲು ಆಗುತ್ತದೆಯಾ? ಮನಸ್ಸು, ಆರೋಗ್ಯ ಎರಡು ಸರಿ ಇಲ್ಲ ಕಾರಣ ನಾನು ಜಿಲ್ಲಾ ಉಸ್ತುವಾರಿಯಾಗಿರುವ ಚಾಮರಾಜನಗರದಲ್ಲಿ ನಡೆದ ವಿಜಯಸಂಕಲ್ಪ ಯಾತ್ರೆಗೆ ಹೋಗಿರಲಿಲ್ಲ ಎಂದು ಸ್ಪಷ್ಟನೆ ನೀಡಿದರು.
ಇದನ್ನೂ ಓದಿ: ‘ಕೈ’ ಹಿಡಿಯುವ ವದಂತಿ ನಡುವೆ ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ಜೊತೆ ವೇದಿಕೆ ಹಂಚಿಕೊಂಡ ವಿ ಸೋಮಣ್ಣ
ಚಾಮರಾಜನಗರ ಜಿಲ್ಲಾ ಉಸ್ತುವಾರಿಯಾಗಿದ್ದರೂ ಜಿಲ್ಲೆಯಲ್ಲಿ ನಡೆದಿದ್ದ ವಿಜಯ ಸಂಕಲ್ಪ ಯಾತ್ರೆಗೆ ಗೈರಾಗಿದ್ದರು. ಈ ಸಮಾವೇಶದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಭಾಗಿಯಾಗಿದ್ದರು. ಈ ಕಾರ್ಯಕ್ರಮಕ್ಕೆ ಸೋಮಣ್ಣ ಗೈರು ಆಗಿರುವುದು ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿತ್ತು.
ಡಿಕೆ ಸಹೋದರರನ್ನು ಹಾಡಿ ಹೊಗಳಿದ ಸೋಮಣ್ಣ
ಅಷ್ಟು ಮಾತ್ರವಲ್ಲದೆ, ಇತ್ತೀಚೆಗೆ ಸೋಮಣ್ಣ ಪಕ್ಷ ಸೇರುವ ಬಗ್ಗೆ ಮಾತನಾಡಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಸೋಮಣ್ಣ ಬರೆದ ಪತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ಕಾರ್ಯಕ್ರಮಕ್ಕೆ ಆಗಮಿಸುವಂತೆ ಪತ್ರ ಬರೆದಿದ್ದಾಗಿ ಹೇಳಿಕೊಂಡಿದ್ದರು. ಆದರೆ ಇಂದು (ಮಾರ್ಚ್ 7) ರಾಮನಗರದಲ್ಲಿ ಸಂಸದ ಡಿಕೆ ಸುರೇಶ್ ಅವರೊಂದಿಗೆ ಸೇರಿಕೊಂಡು ಪ್ರವೇಶದ್ವಾರವನ್ನು ಉದ್ಘಾಟಿಸಿದ್ದಾರೆ. ಅಲ್ಲದೆ, ವೇದಿಕೆ ಕಾರ್ಯಕ್ರಮದಲ್ಲಿ ಡಿಕೆ ಸಹೋದರರನ್ನು ಹಾಡಿ ಹೊಗಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.