TV9kannada Web Team | Edited By: Zahir PY
Updated on: Feb 23, 2023 | 9:23 PM
SRH All Captains List: ಎಸ್ಆರ್ಹೆಚ್ ತಂಡದ 9ನೇ ನಾಯಕ ಎಂಬ ಹೆಗ್ಗಳಿಕೆಗೆ ಐಡೆನ್ ಮಾರ್ಕ್ರಾಮ್ ಪಾತ್ರರಾಗಿದ್ದಾರೆ. ಹಾಗಿದ್ರೆ ಇದಕ್ಕೂ ಮುನ್ನ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಮುನ್ನಡೆಸಿದ 8 ನಾಯಕಗಳು ಯಾರೆಂದು ನೋಡೋಣ…
Feb 23, 2023 | 9:23 PM

ಐಪಿಎಲ್ ಸೀಸನ್ 16 ಗಾಗಿ ಸನ್ರೈಸರ್ಸ್ ಹೈದರಾಬಾದ್ ತಂಡದ ನಾಯಕರಾಗಿ ಸೌತ್ ಆಫ್ರಿಕಾದ ಐಡೆನ್ ಮಾರ್ಕ್ರಾಮ್ ಆಯ್ಕೆಯಾಗಿದ್ದಾರೆ. ಸೌತ್ ಆಫ್ರಿಕಾ ಟಿ20 ಲೀಗ್ನಲ್ಲಿ ಮಾರ್ಕ್ರಾಮ್ ಎಸ್ಆರ್ಹೆಚ್ ಫ್ರಾಂಚೈಸಿಯ ಸನ್ರೈಸರ್ಸ್ ಈಸ್ಟರ್ನ್ ಕೇಪ್ ತಂಡವನ್ನು ಮುನ್ನಡೆಸಿದ್ದರು. ಅಲ್ಲದೆ ಚೊಚ್ಚಲ ಟೂರ್ನಿಯಲ್ಲೇ ಚಾಂಪಿಯನ್ ತಂಡವಾಗಿ ಸನ್ರೈಸರ್ಸ್ ಈಸ್ಟರ್ನ್ ಕೇಪ್ ತಂಡ ಹೊರಹೊಮ್ಮಿತ್ತು.

ಇದೀಗ ನಿರೀಕ್ಷೆಯಂತೆ ಸನ್ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯು ಯಶಸ್ವಿ ನಾಯಕನಿಗೆ ಐಪಿಎಲ್ ತಂಡದ ಸಾರಥ್ಯವನ್ನು ನೀಡಿದ್ದಾರೆ. ಇದರೊಂದಿಗೆ ಎಸ್ಆರ್ಹೆಚ್ ತಂಡದ 9ನೇ ನಾಯಕ ಎಂಬ ಹೆಗ್ಗಳಿಕೆಗೆ ಐಡೆನ್ ಮಾರ್ಕ್ರಾಮ್ ಪಾತ್ರರಾಗಿದ್ದಾರೆ. ಹಾಗಿದ್ರೆ ಇದಕ್ಕೂ ಮುನ್ನ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಮುನ್ನಡೆಸಿದ 8 ನಾಯಕಗಳು ಯಾರೆಂದು ನೋಡೋಣ…

1- ಕುಮಾರ್ ಸಂಗಾಕ್ಕರ: 2013 ರಲ್ಲಿ ನೂತನ ಮಾಲೀಕತ್ವದ ಹಾಗೂ ಹೊಸ ಹೆಸರಿನೊಂದಿಗೆ ಸನ್ರೈಸರ್ಸ್ ಹೈದರಾಬಾದ್ ತಂಡದ ಮೊದಲ ನಾಯಕ ಶ್ರೀಲಂಕಾದ ಕುಮಾರ್ ಸಂಗಾಕ್ಕರ. 9 ಪಂದ್ಯಗಳಲ್ಲಿ ಎಸ್ಆರ್ಹೆಚ್ ತಂಡವನ್ನು ಮುನ್ನಡೆಸಿದ್ದ ಸಂಗಾಕ್ಕರ 4 ಗೆಲುವು ತಂದುಕೊಡುವಲ್ಲಿ ಯಶಸ್ವಿಯಾಗಿದ್ದರು. ಇನ್ನು 4 ಪಂದ್ಯಗಳಲ್ಲಿ ಎಸ್ಆರ್ಹೆಚ್ ಸೋತರೆ, 1 ಪಂದ್ಯವು ಟೈ ಆಗಿತ್ತು.

2- ಕ್ಯಾಮರೋನ್ ವೈಟ್: ಕುಮಾರ್ ಸಂಗಾಕ್ಕರ ಅನುಪಸ್ಥಿತಿಯಲ್ಲಿ ಎಸ್ಆರ್ಹೆಚ್ ತಂಡವನ್ನು 2013 ರಲ್ಲಿ ಆಸ್ಟ್ರೇಲಿಯಾದ ಕ್ಯಾಮರೋನ್ ವೈಟ್ ಕೂಡ ಮುನ್ನಡೆಸಿದ್ದರು. ಒಟ್ಟು 8 ಪಂದ್ಯಗಳಲ್ಲಿ ನಾಯಕರಾಗಿ ಕಾಣಿಸಿಕೊಂಡಿದ್ದ ವೈಟ್ 5 ಬಾರಿ ಗೆಲುವಿನ ರುಚಿ ನೋಡಿದ್ದರು. ಇನ್ನು 3 ಪಂದ್ಯಗಳಲ್ಲಿ ಎಸ್ಆರ್ಹೆಚ್ ತಂಡ ಸೋಲನುಭವಿಸಿತ್ತು.

3- ಶಿಖರ್ ಧವನ್: ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಶಿಖರ್ ಧವನ್ ಕೂಡ ಮುನ್ನಡೆಸಿದ್ದಾರೆ. 2013 ಹಾಗೂ 2014 ರ ನಡುವೆ ಎಸ್ಆರ್ಹೆಚ್ ಪರ ಆಡಿದ್ದ ಧವನ್ ಒಟ್ಟು 16 ಪಂದ್ಯಗಳಲ್ಲಿ ನಾಯಕರಾಗಿದ್ದರು. ಈ ವೇಳೆ ಎಸ್ಆರ್ಹೆಚ್ ತಂಡವು 9 ಪಂದ್ಯಗಳಲ್ಲಿ ಸೋಲನುಭವಿಸಿತ್ತು. ಹಾಗೆಯೇ ಧವನ್ ನಾಯಕತ್ವದಲ್ಲಿ 5 ಗೆಲುವು ದಾಖಲಿಸಿತ್ತು.

4- ಡಾರೆನ್ ಸಮಿ: ವೆಸ್ಟ್ ಇಂಡೀಸ್ನ ಮಾಜಿ ನಾಯಕ ಡಾರೆನ್ ಸಮಿ 2014 ರಲ್ಲಿ ಎಸ್ಆರ್ಹೆಚ್ ತಂಡವನ್ನು 4 ಪಂದ್ಯಗಳನ್ನು ಮುನ್ನಡೆಸಿದ್ದರು. ಈ ವೇಳೆ ಸನ್ರೈಸರ್ಸ್ ತಂಡವು 2 ಪಂದ್ಯಗಳಲ್ಲಿ ಸೋತರೆ, 2 ಪಂದ್ಯಗಳನ್ನು ಗೆದ್ದುಕೊಂಡಿತ್ತು.

5- ಡೇವಿಡ್ ವಾರ್ನರ್: ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ದೀರ್ಘಾವಧಿಯವರೆಗೆ ಮುನ್ನಡೆಸಿದ ನಾಯಕನೆಂದರೆ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್. 2015 ರಿಂದ 2021ರವರೆಗೆ 67 ಪಂದ್ಯಗಳಲ್ಲಿ ವಾರ್ನರ್ ನಾಯಕರಾಗಿ ಕಾಣಿಸಿಕೊಂಡಿದ್ದರು. ಈ ವೇಳೆ ಎಸ್ಆರ್ಹೆಚ್ ತಂಡವು 35 ಪಂದ್ಯಗಳನ್ನು ಗೆದ್ದುಕೊಂಡಿತ್ತು. ಹಾಗೆಯೇ 30 ಪಂದ್ಯಗಳಲ್ಲಿ ಸೋತರೆ, 2 ಪಂದ್ಯ ಟೈ ಆಗಿತ್ತು. ವಿಶೇಷ ಎಂದರೆ ಡೇವಿಡ್ ವಾರ್ನರ್ ಅವರ ನಾಯಕತ್ವದಲ್ಲಿ 2016 ರಲ್ಲಿ ಎಸ್ಆರ್ಹೆಚ್ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿತ್ತು.

6- ಕೇನ್ ವಿಲಿಯಮ್ಸನ್: 2018 ರಲ್ಲಿ ವಾರ್ನರ್ ಅನುಪಸ್ಥಿತಿಯಲ್ಲಿ ಡೇವಿಡ್ ವಾರ್ನರ್ ಎಸ್ಆರ್ಹೆಚ್ ತಂಡವನ್ನು ನ್ಯೂಜಿಲೆಂಡ್ನ ಕೇನ್ ವಿಲಿಯಮ್ಸನ್ ಮುನ್ನಡೆಸಿದ್ದರು. ಹಾಗೆಯೇ 2021 ಹಾಗೂ 2022 ರಲ್ಲೂ ತಂಡದ ಸಾರಥ್ಯವಹಿಸಿದ್ದ ವಿಲಿಯಮ್ಸನ್ 46 ಪಂದ್ಯಗಳಲ್ಲಿ 22 ಗೆಲುವು ತಂದುಕೊಟ್ಟಿದ್ದರು. ಹಾಗೆಯೇ 23 ಪಂದ್ಯಗಳಲ್ಲಿ ಸೋತರೆ, 1 ಪಂದ್ಯವು ಟೈ ಆಗಿತ್ತು.

7- ಭುವನೇಶ್ವರ್ ಕುಮಾರ್: 2019 ಹಾಗೂ 2022 ರ ನಡುವೆ ಭುವನೇಶ್ವರ್ ಕುಮಾರ್ ಎಸ್ಆರ್ಹೆಚ್ ತಂಡವನ್ನು 7 ಪಂದ್ಯಗಳಲ್ಲಿ ಮುನ್ನಡೆಸಿದ್ದಾರೆ. ಈ ವೇಳೆ 5 ಪಂದ್ಯಗಳಲ್ಲಿ ಎಸ್ಆರ್ಹೆಚ್ ಸೋತರೆ, 2 ಪಂದ್ಯಗಳನ್ನು ಮಾತ್ರ ಗೆದ್ದುಕೊಂಡಿತ್ತು.

8- ಮನೀಷ್ ಪಾಂಡೆ: 2021 ರಲ್ಲಿ ಡೇವಿಡ್ ವಾರ್ನರ್ ಅನುಪಸ್ಥಿತಿಯಲ್ಲಿ ಎಸ್ಆರ್ಹೆಚ್ ತಂಡವನ್ನು 1 ಪಂದ್ಯದಲ್ಲಿ ಮನೀಷ್ ಪಾಂಡೆ ಮುನ್ನಡೆಸಿದ್ದರು. ಆ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡವು ಸೋಲನುಭವಿಸಿತ್ತು.

ಇದೀಗ ಸನ್ರೈಸರ್ಸ್ ಹೈದರಾಬಾದ್ ತಂಡದ 9ನೇ ನಾಯಕರಾಗಿ ಐಡೆನ್ ಮಾರ್ಕ್ರಾಮ್ ಆಯ್ಕೆಯಾಗಿದ್ದಾರೆ. ಅತ್ತ ಸೌತ್ ಆಫ್ರಿಕಾ ಟಿ20 ಲೀಗ್ನ ಯಶಸ್ವಿ ನಾಯಕರಾಗಿ ಗುರುತಿಸಿಕೊಂಡಿರುವ ಮಾರ್ಕ್ರಾಮ್ ಐಪಿಎಲ್ನಲ್ಲೂ ತಮ್ಮ ಕ್ಯಾಪ್ಟನ್ ಮೋಡಿಯನ್ನು ಮಾಡಲಿದ್ದಾರಾ ಕಾದು ನೋಡಬೇಕಿದೆ.
ತಾಜಾ ಸುದ್ದಿ