‘ಆರ್‌ಆರ್‌ಆರ್’ ಚಿತ್ರದಲ್ಲಿ ಜೂನಿಯರ್ ಎನ್ಟಿಆರ್ ಅವರು ಮುಸ್ಲಿಂ ರೀತಿ ತೋರಿಸಿದ್ದನ್ನು ತೀವ್ರವಾಗಿ ವಿರೋಧಿಸಲಾಗಿತ್ತು. ಆ ದೃಶ್ಯವನ್ನು ಕತ್ತರಿಸದೇ ಇದ್ದರೆ ಚಿತ್ರಮಂದಿರಕ್ಕೆ ಬೆಂಕಿ ಇಡುವುದಾಗಿ ಹೆದರಿಸಿದ್ದರು.
ಎಸ್.ಎಸ್. ರಾಜಮೌಳಿ (SS Rajamouli) ಅವರ ಖ್ಯಾತಿ ‘ಆರ್‌ಆರ್‌ಆರ್’ ಚಿತ್ರದಿಂದ ದ್ವಿಗುಣಗೊಂಡಿದೆ. ಹಾಲಿವುಡ್ ಮಂದಿಗೂ ರಾಜಮೌಳಿ ಅವರ ಪರಿಚಯ ಆಗಿದೆ. ರಾಜಮೌಳಿ ಅವರು ಮುಂಬರುವ ದಿನಗಳಲ್ಲಿ ಹಾಲಿವುಡ್ ಅಂಗಳಕ್ಕೆ ಕಾಲಿಟ್ಟರೂ ಅಚ್ಚರಿ ಏನಿಲ್ಲ. ‘ಆರ್‌ಆರ್‌ಆರ್’ ಚಿತ್ರದ (RRR Movie) ‘ನಾಟು ನಾಟು..’ ಹಾಡು ಆಸ್ಕರ್ ಗೆದ್ದ ನಂತರದಲ್ಲಿ ಈ ಸಿನಿಮಾನ ಕೊಂಡಾಡಿದವರು ಸಾಕಷ್ಟು ಮಂದಿ ಇದ್ದಾರೆ. ಆದರೆ, ಸಿನಿಮಾ ರಿಲೀಸ್ ಸಂದರ್ಭದಲ್ಲಿ ಚಿತ್ರಕ್ಕೆ ಅನೇಕರು ವಿರೋಧವ್ಯಕ್ತಪಡಿಸಿದ್ದರು. ಈ ಬಗ್ಗೆ ರಾಜಮೌಳಿ ಅವರು ಇತ್ತೀಚಿನ ಸಂದರ್ಶನ ಒಂದರಲ್ಲಿ ಮಾತನಾಡಿದ್ದರು.
ತೆಲಂಗಾಣ ಬಿಜೆಪಿ ರಾಜ್ಯಾಧ್ಯಕ್ಷ ಬಂಡಿ ಸಂಜಯ್ ಕುಮಾರ್ ಅವರು ‘ಆರ್‌ಆರ್‌ಆರ್’ ಚಿತ್ರಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಜೂನಿಯರ್ ಎನ್ಟಿಆರ್ ಅವರು ಮುಸ್ಲಿಂ ರೀತಿ ತೋರಿಸಿದ್ದನ್ನು ತೀವ್ರವಾಗಿ ವಿರೋಧಿಸಿದ್ದರು. ‘ಆರ್‌ಆರ್‌ಆರ್’ ಚಿತ್ರದಲ್ಲಿ ಆ ದೃಶ್ಯವನ್ನು ಕತ್ತರಿಸದೇ ಇದ್ದರೆ ಚಿತ್ರಮಂದಿರಕ್ಕೆ ಬೆಂಕಿ ಇಡುವುದಾಗಿ ಹೆದರಿಸಿದ್ದರು. ಈ ವಿಚಾರವನ್ನು ರಾಜಮೌಳಿ ಮೆಲಕು ಹಾಕಿದ್ದಾರೆ.
‘ನಾನು 12 ಸಿನಿಮಾ ಮಾಡಿದ್ದೇನೆ. ಈ ವೇಳೆ ನನಗೆ ಒಂದು ವಿಚಾರ ಅರ್ಥವಾಗಿದೆ. ಸಿನಿಮಾಗೆ ಯಾರಿಂದಲೂ ವಿರೋಧ ವ್ಯಕ್ತವಾಗಿಲ್ಲ ಎಂದರೆ ಜನರು ನಿಮ್ಮ ಸಿನಿಮಾಗಳ ಬಗ್ಗೆ ಗಮನ ನೀಡುತ್ತಿಲ್ಲ ಎಂದರ್ಥ. ಒಂದು ಸಿನಿಮಾಗೆ ಜನಪ್ರಿಯತೆ ಸಿಕ್ಕಿತು ಎಂದರೆ ಅಂಥ ಸಿನಿಮಾಗಳನ್ನು ವಿರೋಧಿಸುವವರು ಇದ್ದೇ ಇರುತ್ತಾರೆ’ ಎಂದಿದ್ದಾರೆ ಅವರು.
ಇದನ್ನೂ ಓದಿ: RRR Movie: ‘ಆರ್‌ಆರ್‌ಆರ್’ ಆಸ್ಕರ್ ಗೆದ್ದ ಬಳಿಕ ಹೇಗಿತ್ತು ನೋಡಿ ಇಡೀ ತಂಡದ ಸಂಭ್ರಮ
‘ಆರ್‌ಆರ್‌ಆರ್’ ಚಿತ್ರದಲ್ಲಿ ನಾಯಕ ತಲೆಗೆ ಕ್ಯಾಪ್ ಧರಿಸಿ ಮುಸ್ಲಿಮರಂತೆ ಕಾಣಿಸಿಕೊಳ್ಳುತ್ತಾರೆ. ಆ ದೃಶ್ಯ ತೆಗೆಯದೇ ಇದ್ದರೆ ಚಿತ್ರಮಂದಿರವನ್ನು ಸುಟ್ಟುಹಾಕುವುದಾಗಿ ಹಾಗೂ ನನ್ನನ್ನು ಸಾರ್ವಜನಿಕವಾಗಿ ಹೊಡೆಯುವುದಾಗಿ ಬಲಪಂಥೀಯ ರಾಜಕಾರಣಿ ಒಬ್ಬರು ಬೆದರಿಕೆ ಹಾಕಿದರು. ಇದೇ ವೇಳೆ ನಾನು ಹಿಂದೂ ರಾಷ್ಟ್ರೀಯತೆಯನ್ನು ಪ್ರಚಾರ ಮಾಡುತ್ತಿದ್ದೇನೆ ಎಂದು ಅನೇಕ ಎಡಪಂಥೀಯರು ಆರೋಪಿಸಿದರು’ ಎಂದಿದ್ದಾರೆ ರಾಜಮೌಳಿ.
‘ಯಾವುದೇ ವಿಚಾರಕ್ಕೆ ಯಾರು ಬೇಕಾದರೂ ಜಗಳ ಆಡಲಿ, ನಾನು ತೀವ್ರವಾದಿಗಳನ್ನು ಖಂಡಿಸುತ್ತೇನೆ. ನನ್ನ ಸಿನಿಮಾದಲ್ಲಿ ಬರುವ ಪಾತ್ರವನ್ನು ಏಕೆ ಆ ರೀತಿ ತೋರಿಸಿದ್ದೇನೆ ಎಂಬುದನ್ನು ನೋಡುವ ತಾಳ್ಮೆಯೂ ಕೆಲವರಿಗೆ ಇಲ್ಲ. ನಾನು ರಾಷ್ಟ್ರೀಯತಾವಾದಿ ಹಾಗೂ ಉದಾರವಾದಿ ಎರಡೂ ಅಲ್ಲ ಎನ್ನುವ ಖುಷಿ ಇದೆ’ ಎಂದಿದ್ದಾರೆ ಅವರು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ