Harmanpreet Kaur: ಈ ಹೃದಯ ವಿದ್ರಾವಕ ಸೋಲಿನ ನಂತರ ಟೀಂ ಇಂಡಿಯಾ ಮತ್ತೆ ಪುಟಿದೇಳಲಿದೆ ಮತ್ತು ಮೈದಾನದಲ್ಲಿ ಉತ್ತಮ ಪ್ರದರ್ಶನ ನೀಡಲಿದೆ ಎಂದು ಕೌರ್ ಬರೆದುಕೊಂಡಿದ್ದಾರೆ.
ಹರ್ಮನ್‌ಪ್ರೀತ್ ಕೌರ್
ಮಹಿಳಾ ಟಿ20 ವಿಶ್ವಕಪ್‌ನ (T20 World Cup 2023) ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತ ಭಾರತ (India vs Australia) ಬರಿಗೈಯಲ್ಲಿ ತವರಿಗೆ ಮರಳುತ್ತಿದೆ. ಇತ್ತ ತನ್ನ ಅಜಾಗರೂಕತೆಯಿಂದಲೇ ತಂಡಕ್ಕೆ ಸೋಲಾಯ್ತು ಎಂಬ ದುಃಖದಲ್ಲಿರುವ ಟೀಂ ಇಂಡಿಯಾ ನಾಯಕಿ ಹರ್ಮನ್‌ಪ್ರೀತ್ ಕೌರ್ (Harmanpreet Kaur) ಕ್ರಿಕೆಟ್ ಅಭಿಮಾನಿಗಳಿಗೆ ಭಾವನಾತ್ಮಕ ಸಂದೇಶವನ್ನು ಹಂಚಿಕೊಳ್ಳುವ ಮೂಲಕ ಮತ್ತೆ ಪುಟಿದೇಳುವ ಆತ್ಮವಿಶ್ವಾಸ ತುಂಬಿದ್ದಾರೆ. ವಾಸ್ತವವಾಗಿ ಟಿ20 ವಿಶ್ವಕಪ್ ಸೆಮಿಫೈನಲ್ಲಿ ಬಲಿಷ್ಠ ಆಸ್ಟ್ರೇಲಿಯನ್ನರ ಕೈಯಲ್ಲಿ ಭಾರತ ತಂಡ ಐದು ರನ್‌ಗಳ ಸೋಲು ಕಂಡಿತು. 173 ರನ್‌ಗಳ ಗುರಿ ಬೆನ್ನತ್ತಿದ ಭಾರತ ಒಂದು ಹಂತದಲ್ಲಿ ಗೆಲುವಿನ ಹಾದಿಯಲ್ಲಿತ್ತು. ಹರ್ಮನ್ ಕೂಡ ಅರ್ಧಶತಕ ದಾಖಲಿಸಿ ತಂಡವನ್ನು ಗೆಲುವಿನ ದಡ ಸೇರಿಸುವ ಉತ್ಸಾಹದಲ್ಲಿದ್ದರು. ಆದರೆ ನಿರ್ಣಾಯಕ ಸಮಯದಲ್ಲಿ ಭಾರತದ ನಾಯಕಿ ರನ್ ಔಟ್ ಆಗಿದ್ದು ತಂಡಕ್ಕೆ ಹೊಡೆತ ನೀಡಿತು. ಸೋಲಿನ ನಂತರ ಮೈದಾನದಲ್ಲಿ ಕಣ್ಣೀರಿಟ್ಟಿದ್ದ ಹರ್ಮನ್ ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳಿಗೆ ಭಾವನಾತ್ಮಕ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ.
ಟೀಂ ಇಂಡಿಯಾ ಮತ್ತೆ ಪುಟಿದೇಳಲಿದೆ
ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಸಂದೇಶ ಬರೆದಿರುವ ಹರ್ಮನ್‌ಪ್ರೀತ್ ಅದರಲ್ಲಿ, ಪಂದ್ಯಾವಳಿಯಲ್ಲಿ ತಮ್ಮನ್ನು ಬೆಂಬಲಿಸಿದ ಅಭಿಮಾನಿಗಳಿಗೆ ಧನ್ಯವಾದ ಹೇಳುತ್ತಾ, ತಂಡವು ಸೋತಿರುವುದು ದುಃಖಕರವಾಗಿದೆ. ಆದರೆ ಈ ಹೃದಯ ವಿದ್ರಾವಕ ಸೋಲಿನ ನಂತರ ಟೀಂ ಇಂಡಿಯಾ ಮತ್ತೆ ಪುಟಿದೇಳಲಿದೆ ಮತ್ತು ಮೈದಾನದಲ್ಲಿ ಉತ್ತಮ ಪ್ರದರ್ಶನ ನೀಡಲಿದೆ. ಒಬ್ಬ ಕ್ರಿಕೆಟ್ ಅಭಿಮಾನಿಯಾಗಿ ನಿಮ್ಮ ತಂಡವು ಸೋತಿರುವುದನ್ನು ನೋಡಿ ನಿಮಗೆ ಎಷ್ಟು ದುಃಖವಾಗಿದೆ ಎಂದು ನನಗೆ ತಿಳಿದಿದೆ. ಆದರೆ ನಾವು ಮತ್ತೆ ಪುಟಿದೇಳುತ್ತೇವೆ. ಉತ್ತಮ ಪ್ರದರ್ಶನ ನೀಡುತ್ತೇವೆ ಎಂದು ಕೌರ್ ತಮ್ಮ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.
This is for all our fans across the globe who have supported us throughout this World Cup . I thank you for believing in our journey. I know as a cricket fan it’s sad to see your team loose . All I can say is that we will come back strongly and put a great show out there .🙏🏼🇮🇳
— Harmanpreet Kaur (@ImHarmanpreet) February 24, 2023
ನೀವು ತುಂಬಾ ಚೆನ್ನಾಗಿ ಆಡಿದ್ದೀರಿ
ಇದೇ ವೇಳೆ ಇದಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ ನೆಟ್ಟಿಗರು ಕೌರ್ ಬೆಂಬಲಕ್ಕೆ ನಿಂತಿದ್ದಾರೆ. ಈ ನಿಟ್ಟಿನಲ್ಲಿ ಇಟಾಲಿಯನ್ ಫುಟ್ಬಾಲ್ ಆಟಗಾರ್ತಿ ಅಗಾಥಾ ಇಸಾಬೆಲ್ಲಾ ಸೆಂಟಾಸ್ಸೊ, ರೀ ಟ್ವೀಟ್ ಮಾಡಿದ್ದು, ‘ನೀವು ಇದನ್ನು ಖಂಡಿತ ಮಾಡುತ್ತೀರಿ ಎಂಬುದು ನನಗೆ ಖಾತ್ರಿಯಿದೆ. ಇಟಲಿಯಿಂದ ನಾನು ನಿಮಗೆ ಹೊಸ ಅಭಿಮಾನಿಯಾಗಿದ್ದೇನೆ. ನೀವು ತುಂಬಾ ಚೆನ್ನಾಗಿ ಆಡಿದ್ದೀರಿ ಎಂದು ಬರೆದುಕೊಂಡಿದ್ದಾರೆ. ಏನೇ ಆಗಲಿ ನಾವು ಟೀಂ ಇಂಡಿಯಾದ ಹಿಂದೆ ಸದಾ ಇರುತ್ತೇವೆ ಎಂದು ಕೆಲವು ನೆಟಿಜನ್ಗಳು ಕಮೆಂಟ್ ಮಾಡಿದ್ದರೆ, ಇನ್ನು ಕೆಲವರು ‘ನೀವು ಅದ್ಭುತವಾಗಿ ಆಡಿದ್ದೀರಿ. ಇದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ರೀಟ್ವಿಟ್ ಮಾಡಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ