ವಿಜಯ್ರ ವಾರಿಸು, ಅಜಿತ್ರ ತುನಿವು ಒಟ್ಟಿಗೆ ಬಿಡುಗಡೆ ಆಗಿದ್ದವು. ಬಾಕ್ಸ್ ಆಫೀಸ್ನಲ್ಲಿ ಕೊನೆಗೆ ಗೆದ್ದಿದ್ದು ಯಾರು?
ತುನಿವು-ವಾರಿಸು
ಕನ್ನಡ ಚಿತ್ರರಂಗಕ್ಕೆ ಹೋಲಿಸಿದರೆ ತೆಲುಗು, ತಮಿಳಿನಲ್ಲಿ ಸ್ಟಾರ್ ವಾರ್ಸ್ ತುಸು ಹೆಚ್ಚು. ತೆಲುಗಿನಲ್ಲಿ ಅದು ಅವ್ಯಾಹತವಾಗಿದ್ದರೆ, ತಮಿಳಿನಲ್ಲಿ ಸ್ಟಾರ್ ವಾರ್ ಎಂಬುದು ಬಹುತೇಕ ನಟ ವಿಜಯ್ (Vijay) ಹಾಗೂ ಅಜಿತ್ (Ajith) ಅವರುಗಳಿಗಷ್ಟೆ ಸೀಮಿತವಾಗಿದೆ. ತಮಿಳಿನ ಇತರೆ ನಟರಿಗೂ ದೊಡ್ಡ ಸಂಖ್ಯೆಯ ಅಭಿಮಾನಿಗಳಿದ್ದಾರಾದರೂ ಹೆಚ್ಚು ಜಗಳ ನಡೆಯುವುದು ವಿಜಯ್ ಹಾಗೂ ಅಜಿತ್ ಅಭಿಮಾನಿಗಳ ನಡುವೆ.
ಈ ಸ್ಟಾರ್ ವಾರ್ಗೆ ತುಪ್ಪ ಸುರಿಯಲೆಂಬಂತೆ ಕಳೆದ ಜನವರಿ ತಿಂಗಳಲ್ಲಿ ವಿಜಯ್ ನಟನೆಯ ‘ವಾರಿಸು’ ಹಾಗೂ ಅಜಿತ್ ನಟನೆಯ ‘ತುನಿವು’ ಸಿನಿಮಾಗಳು ಏಕಕಾಲಕ್ಕೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆದವು. ಇಬ್ಬರೂ ನಟರ ಅಭಿಮಾನಿಗಳು ತಮ್ಮ ನಟನ ಸಿನಿಮಾ ಸೂಪರ್ ಎಂದು ಎದೆತಟ್ಟಿಕೊಂಡರು. ಎರಡೂ ಸಿನಿಮಾಗಳು ಸಾಧಾರಣವಾಗಿವೆಯಷ್ಟೆ ಎಂದು ಸಿನಿ ಪಂಡಿತರು ವಿಮರ್ಶೆ ನೀಡಿದರಾದರೂ ಚಿತ್ರಮಂದಿರಗಳಲ್ಲಿ ಎರಡೂ ಸಿನಿಮಾಗಳು ಹಿಟ್ ಎನಿಸಿಕೊಂಡವು.
ವಿಜಯ್ರ ‘ವಾರಿಸು’ ಹಾಗೂ ಅಜಿತ್ರ ‘ತುನಿವು’ ಸಿನಿಮಾಗಳು ಹಿಟ್ ಆದವಾದರೂ ಯಾವ ಸಿನಿಮಾ ಹೆಚ್ಚು ಕಲೆಕ್ಷನ್ ಮಾಡಿತು ಎಂಬ ಬಗ್ಗೆ ಸಿನಿಮಾ ಬಿಡುಗಡೆಯಾದ ಮೊದಲ ದಿನದಿಂದಲೂ ವಿಜಯ್ ಹಾಗೂ ಅಜಿತ್ ಫ್ಯಾನ್ಗಳ ನಡುವೆ ಚರ್ಚೆ ನಡೆಯುತ್ತಲೇ ಇದೆ. ಇದೀಗ ಎರಡೂ ಸಿನಿಮಾಗಳ ಪೈನಲ್ ಕಲೆಕ್ಷನ್ ರಿಪೋರ್ಟ್ ಹರಿದಾಡುತ್ತಿದ್ದು, ಇದು ಮತ್ತೊಮ್ಮೆ ವಿಜಯ್-ಅಜಿತ್ ಅಭಿಮಾನಿಗಳ ನಡುವೆ ಕಿತ್ತಾಟಕ್ಕೆ ಕಾರಣವಾಗಿದೆ.
‘ವಾರಿಸು’ ಹಾಗೂ ‘ತುನಿವು’ ಎರಡೂ ಸಿನಿಮಾಗಳು ಬ್ಲಾಕ್ ಬಸ್ಟರ್ಗಳಾಗಿವೆ. ಆದರೂ ಹೆಚ್ಚು ಹಣ ಗಳಿಸಿರುವುದು ವಿಜಯ್ ನಟನೆಯ ‘ವಾರಿಸು’ ಎನ್ನಲಾಗುತ್ತಿದೆ. ‘ವಾರಿಸು’ ಸಿನಿಮಾಕ್ಕೆ ಪ್ರಬಲ ಪ್ರತಿಸ್ಪರ್ಧೆಯನ್ನೇ ‘ತುನಿವು’ ನೀಡಿತಾದರೂ 250 ಕೋಟಿಗೆ ತನ್ನ ಚಿತ್ರಮಂದಿರದ ಓಟವನ್ನು ಬಹುತೇಕ ಕೊನೆ ಮಾಡಿದೆ. ಆದರೆ ‘ವಾರಿಸು’ ಸಿನಿಮಾ ಮುನ್ನೂರು ಕೋಟಿಗೂ ಹೆಚ್ಚು ಹಣವನ್ನು ಕಲೆಕ್ಷನ್ ಮಾಡಿದೆ ಎಂಬುದು ತಮಿಳು ಟ್ರೇಡ್ ಅನಲಿಸ್ಟ್ಗಳ ಲೆಕ್ಕ.
‘ವಾರಿಸು’ ಹಾಗೂ ‘ತುನಿವು’ ಬಾಕ್ಸ್ ಆಫೀಸ್ ಫೈಟ್ನಲ್ಲಿ ‘ತುನಿವು’ ಆರಂಭದ ಕೆಲ ದಿನಗಳಲ್ಲಿ ತುಸುವಷ್ಟೆ ಮುಂದಿತ್ತಾದರೂ ಮೊದಲ ವಾರದ ಬಳಿಕವೂ ‘ವಾರಿಸು’ ಸಿನಿಮಾ ಚಿತ್ರಮಂದಿರಗಳ ಮೇಲೆ ತನ್ನ ಹಿಡಿತ ಮುಂದುವರೆಸಿತು. ಫ್ಯಾಮಿಲಿ ಆಡಿಯೆನ್ಸ್ ಅನ್ನು ಹೆಚ್ಚು ಆಕರ್ಷಿಸಿದ ಕಾರಣ ಸಿನಿಮಾ ಹೆಚ್ಚು ಕಾಲ ಓಡಿತಲ್ಲದೆ ಸೂಪರ್ ಹಿಟ್ ಎನಿಸಿಕೊಂಡಿತು. ಅಲ್ಲದೆ, ತಮಿಳುನಾಡು ಹೊರತುಪಡಿಸಿ ಬೇರೆ ರಾಜ್ಯ ಹಾಗೂ ದೇಶಗಳಲ್ಲಿ ‘ತುನಿವು’ ಸಿನಿಮಾಕ್ಕಿಂತಲೂ ಹೆಚ್ಚು ಮೊತ್ತವನ್ನು ‘ವಾರಿಸು’ ಗಳಿಸಿದ್ದು ಸಹ ಅದರ ದೊಡ್ಡ ಮುನ್ನಡೆಗೆ ಕಾರಣವಾಯಿತು.
ವಿಜಯ್ ನಟನೆಯ ‘ವಾರಿಸು’ ಸಿನಿಮಾದಲ್ಲಿ ಕನ್ನಡತಿ ರಶ್ಮಿಕಾ ಮಂದಣ್ಣ ನಾಯಕಿಯಾಗಿದ್ದು, ಈ ಕೌಟುಂಬಿಕ ಕತೆಯುಳ್ಳ ಸಿನಿಮಾವನ್ನು ತೆಲುಗಿನ ವಂಶಿ ಪೈಡಪಲ್ಲಿ ನಿರ್ದೇಶನ ಮಾಡಿದ್ದಾರೆ. ಸಿನಿಮಾ ನಿರ್ಮಾಣ ಮಾಡಿರುವುದು ಸಹ ತೆಲುಗಿನ ಜನಪ್ರಿಯ ನಿರ್ಮಾಪಕ ದಿಲ್ ರಾಜು. ಇನ್ನು ಅಜಿತ್ ನಟನೆಯ ‘ತುನಿವು’ ಸಿನಿಮಾವು ವ್ಯಕ್ತಿಯೊಬ್ಬ ಬ್ಯಾಂಕ್ ದೋಚುವ ಆಕ್ಷನ್ ಥ್ರಿಲ್ಲರ್ ಕತೆ ಹೊಂದಿದ್ದು, ಸಿನಿಮಾವನ್ನು ಎಚ್ ವಿನೋದ್ ನಿರ್ದೇಶಿಸಿದ್ದಾರೆ. ಅಜಿತ್ಗಾಗಿ ಈ ವರೆಗೆ ಮೂರು ಸಿನಿಮಾಗಳನ್ನು ವಿನೋದ್ ನಿರ್ದೇಶನ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ