ಹರಪನಹಳ್ಳಿ ತಾಲೂಕಿನ ರಂಗಾಪುರ ಗ್ರಾಮದಲ್ಲಿ ವಾಸವಿದ್ದ ಚೌಡಮ್ಮ ಹಾಗೂ ಹನಮಂತಪ್ಪ ಎಂಬ ದಂಪತಿಗಳು, ಮದುವೆಯಾಗಿ ಹಲವು ವರ್ಷಗಳು ಕಳೆದಿದೆ. ಹೀಗೆ ಚೆನ್ನಾಗಿದ್ದ ಸಂಸಾರದಲ್ಲಿ ಇತ್ತೀಚೆಗೆ ಇಬ್ಬರ ನಡುವೆ ಜಗಳ ಶುರುವಾಗಿದ್ದು, ಇದೀಗ ಸಾವಿನಲ್ಲಿ ಅಂತ್ಯವಾಗಿದೆ.
ವಿಜಯನಗರ ಪತ್ನಿಯನ್ನ ಕೊಲೆ ಮಾಡಿ ತಾನು ನೇಣಿಗೆ ಶರಣಾದ ಪತಿ
ವಿಜಯನಗರ: ಜಿಲ್ಲೆಯ ಹರಪನಹಳ್ಳಿ ತಾಲೂಕಿನ ರಂಗಾಪುರ ಗ್ರಾಮದಲ್ಲಿ ವಾಸವಿದ್ದ ಚೌಡಮ್ಮ ಹಾಗೂ ಹನಮಂತಪ್ಪ ಎಂಬ ದಂಪತಿಗಳು, ಮದುವೆಯಾಗಿ ಎಳೆಂಟು ವರ್ಷವಾಗಿತ್ತು. ಮುದ್ದಾದ ಮೂರು ಮಕ್ಕಳಿದ್ದಾರೆ. ಬೆಳಗಾದರೆ ಸಾಕು ಭೂಮಿಯಲ್ಲಿ ಮೈ ಮುರಿದು ದುಡಿಯುತ್ತಿದ್ದ ಹನಮಂತಪ್ಪ. ಜೊತೆಗೆ ಕುಸ್ತಿ ಪೈಲ್ವಾನ್ ಕೂಡ, ಸುತ್ತ ಹಳ್ಳಿಗಳ ಜಾತ್ರೆಗಳಲ್ಲಿ ಕುಸ್ತಿ ಸ್ಪರ್ಧೆಗಳಿದ್ರೆ ತಪ್ಪದೇ ಭಾಗಿ ಆಗುತ್ತಿದ್ದ. ಇಂತಹ ಪೈಲ್ವಾನ್ ಕ್ಷುಲ್ಲಕ ಕಾರಣಕ್ಕೆ ಪತ್ನಿ ಜೊತೆ ಜಗಳವಾಡಿ ಬಾರುಕೋಲಿನಿಂದ ಹಲ್ಲೆ ಮಾಡಿದ್ದಾನೆ. ಇದಾದ ಬಳಿಕ ಸಿಟ್ಟು ಎಲ್ಲಿತ್ತೋ ಗೊತ್ತಿಲ್ಲ. ಬಾರುಕೋಲಿನಿಂದ ಕುತ್ತಿಗೆ ಬಿಗಿದು ಉಸಿರು ಗಟ್ಟಿಸಿ ಚೌಡಮ್ಮನನ್ನ ಕೊಲೆ ಮಾಡಿ ಬಿಟ್ಟಿದ್ದಾನೆ. ಪತ್ನಿ ಸತ್ತಿದ್ದಾಳೆ ಎಂದು ಗೊತ್ತಾದ ಬಳಿಕ ಹೆದರಿ ಅದೇ ಜಮೀನಿನ ಪಕ್ಕದ ಮರಕ್ಕೆ ನೇಣು ಹಾಕಿಕೊಂಡು ತಾನು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಹನಮಂತಪ್ಪ ಗ್ರಾಮದಲ್ಲಿ ಬೇರೆಯವರ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಎಂಬ ಶಂಕೆ ವ್ಯಕ್ತವಾಗಿದೆ. ಇದನ್ನ ಪತ್ನಿ ಬಲವಾಗಿ ವಿರೋಧಿಸಿದ್ದಳು. ಪತ್ನಿ ವಿರೋಧಿಸಿದ್ದಕ್ಕೆ ರೊಚ್ಚಿಗೆದ್ದ ಹನಮಂತಪ್ಪ ಅವಳ ಕೊಲೆ ಮಾಡಿ ಬಿಟ್ಟಿದ್ದಾನೆ. ಈ ವಿಚಾರ ತಿಳಿಯುತ್ತಿದ್ದಂತೆ ಹಲವಾಗಲು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಪತ್ನಿ ಶವವನ್ನ ತೆಲಗಿ ಸರ್ಕಾರಿ ಸಮುದಾಯ ಆಸ್ಪತ್ರೆಯಲ್ಲಿ ಹಾಗೂ ಪತಿ ಶವವನ್ನ ಹರಪನಹಳ್ಳಿ ತಾಲೂಕಾ ಆಸ್ಪತ್ರೆಗೆ ಶವ ಪರೀಕ್ಷೆಗೆ ಕಳುಹಿಸಿದ್ದಾರೆ. ಜಮೀನಿನಲ್ಲಿ ನಿರ್ಜನ ಪ್ರದೇಶದಲ್ಲಿ ಪತ್ನಿಯನ್ನ ಕೊಲೆ ಮಾಡಿ, ನಂತರ ತಾನು ಸಾವಿಗೆ ಶರಣಾಗಿದ್ದು ದುರಂತವೇ ಸರಿ.
ಇದನ್ನೂ ಓದಿ:ಶ್ರದ್ಧಾ ರೀತಿಯಲ್ಲೇ ಮತ್ತೊಂದು ಕೊಲೆ: ಢಾಬಾದ ಫ್ರಿಡ್ಜ್‌ನಲ್ಲಿ ಬಾಲಕಿಯ ಶವ ಪತ್ತೆ
ಈ ಬಗ್ಗೆ ಹಲವಾಗಲು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಹರಪನಹಳ್ಳಿ ಡಿವೈಎಸ್ಪಿ ರಾಮಮೂರ್ತಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪತಿಕಾಟಕ್ಕೆ ಬೇಸತ್ತು ತವರಿಗೆ ಹೋಗಲು ಚೌಡಮ್ಮ ನಿರ್ಧರಿಸಿದ್ದಳು. ಈ ವಿಚಾರ ಪತಿಯ ಮುಂದೆ ಹೇಳಿದಾಗ ಜಗಳ ಶುರುವಾಗಿದೆ. ಇಬ್ಬರ ನಡುವಿನ ಜಗಳ ಮೂರು ಜನ ಅಮಾಯಕ ಮಕ್ಕಳನ್ನ ಅನಾಥ ಮಾಡಿದೆ ಅಂದ್ರೆ ತಪ್ಪಾಗಲಿಕ್ಕಿಲ್ಲ.
ವರದಿ: ಬಸವರಾಜ್ ದೊಡ್ಮನಿ ಟಿವಿ9 ದಾವಣಗೆರೆ
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ತಾಜಾ ಸುದ್ದಿ