WPL 2023 Auction: ಮಹಿಳಾ ಪ್ರೀಮಿಯರ್ ಲೀಗ್‌ಗಾಗಿ ವಿಶ್ವದಾದ್ಯಂತ 1525 ಆಟಗಾರ್ತಿಯರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದರು. ಆದರೆ ಹರಾಜಿಗಾಗಿ ಬಿಸಿಸಿಐ ಸಿದ್ಧಪಡಿಸಿರುವ ಅಂತಿಮ ಪಟ್ಟಿಯಲ್ಲಿ 409 ಆಟಗಾರರು ಸ್ಥಾನ ಪಡೆದಿದ್ದಾರೆ.
ಮಹಿಳಾ ಪ್ರೀಮಿಯರ್ ಲೀಗ್ ಹರಾಜು
ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್‌ನ (Women’s Premier League) ಮೆಗಾ ಹರಾಜು ಇಂದು ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ನಲ್ಲಿ ಮಧ್ಯಾಹ್ನ 2:30 ರಿಂದ ಪ್ರಾರಂಭವಾಗಲಿದೆ. ಈ ಮಹಿಳಾ ಪ್ರೀಮಿಯರ್ ಲೀಗ್ಗೆ ಸಂಬಂಧಿಸಿದಂತೆ ಬಿಸಿಸಿಐ (BCCI) ಈಗಾಗಲೇ ಎಲ್ಲಾ ಅಗತ್ಯ ಮಾಹಿತಿಯನ್ನು ಬಿಡುಗಡೆ ಮಾಡಿದೆ. ಲೀಗ್‌ನ ವೇಳಾಪಟ್ಟಿಯಿಂದ ಹಿಡಿದು ಡಬ್ಲ್ಯುಪಿಎಲ್ ಹರಾಜಿನ (WPL Auction) ದಿನಾಂಕದವರೆಗೆ ಎಲ್ಲವನ್ನೂ ನಿರ್ಧರಿಸಲಾಗಿದೆ. ಕಳೆದ ತಿಂಗಳು ತಂಡಗಳನ್ನು ನಿರ್ಧರಿಸಲಾಗಿತ್ತು. ಇನ್ನು ಕೆಲವೇ ಗಂಟೆಗಳಲ್ಲಿ ಯಾವ ಆಟಗಾರ್ತಿ ಯಾವ ತಂಡ ಸೇರಲಿದ್ದಾರೆ ಎಂಬ ಮಾಹಿತಿಯೂ ಹೊರಬೀಳಲಿದೆ. ಎಲ್ಲಾ ಫ್ರಾಂಚೈಸಿಗಳು ತಮಗೆ ಅವಶ್ಯಕವಾಗಿರುವ ಆಟಗಾರ್ತಿಯರ ಖರೀದಿಗೆ ಇನ್ನಿಲ್ಲದ ತಂತ್ರ ಹೆಣೆದಿದ್ದು, ಯಾವ ತಂಡಕ್ಕೆ ಯಾರು ಸೇರುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಇನ್ನು ಆಟಗಾರ್ತಿಯರ ವಿಚಾರಕ್ಕೆ ಬಂದರೆ, ಈ ಹರಾಜಿನಲ್ಲಿ ಹಲವು ಆಟಗಾರ್ತಿಯರು ಅತ್ಯಧಿಕ ಮೂಲ ಬೆಲೆಯೊಂದಿಗೆ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದು ಅವರುಗಳ ವಿವರ ಇಲ್ಲಿದೆ.
ಕಳೆದ ಹಲವು ವರ್ಷಗಳಿಂದ ಮಹಿಳಾ ಪ್ರೀಮಿಯರ್ ಲೀಗ್‌ನ ಆಯೋಜನೆಗೆ ಸಂಬಂಧಿಸಿದಂತೆ ಚರ್ಚೆಗಳು ನಡೆಯುತ್ತಿದ್ದವು. ಅಂತಿಮವಾಗಿ ಕಳೆದ ವರ್ಷ ಈ ಲೀಗ್ 2023 ರಿಂದ ಪ್ರಾರಂಭವಾಗಲಿದೆ ಎಂದು ಅಧಿಕೃತವಾಗಿ ಘೋಷಿಸಲಾಯಿತು. ಕಳೆದ ತಿಂಗಳು, ಮಹಿಳಾ ಪ್ರೀಮಿಯರ್ ಲೀಗ್‌ನ 5 ತಂಡಗಳು ಒಟ್ಟು ರೂ 4669.99 ಕೋಟಿಗೆ (ಅಂದಾಜು ರೂ 4670 ಕೋಟಿ) ಮಾರಾಟವಾಗಿವೆ. ಈ ಐದು ತಂಡಗಳು ಅಹಮದಾಬಾದ್, ಮುಂಬೈ, ಬೆಂಗಳೂರು, ದೆಹಲಿ ಮತ್ತು ಲಕ್ನೋ ಮೂಲದವುಗಳಾಗಿರಲಿವೆ. ಲೀಗ್‌ನ ಮೊದಲ ಪಂದ್ಯ ಮಾರ್ಚ್ 4 ರಂದು ನಡೆಯಲಿದ್ದು, ಲೀಗ್‌ನ ಎಲ್ಲಾ ಪಂದ್ಯಗಳು ಮುಂಬೈನ ಬ್ರಬನ್ ಮತ್ತು ಡಿವೈ ಪಾಟೀಲ್‌ನಲ್ಲಿ ನಡೆಯಲಿದೆ.
ILT20 League: ಚೊಚ್ಚಲ ಯುಎಇ ಟಿ20 ಲೀಗ್ ಗೆದ್ದ ಅದಾನಿ ಒಡೆತನದ ಗಲ್ಫ್ ಜೈಂಟ್ಸ್ ತಂಡ..!
409 ಆಟಗಾರ್ತಿಯರು ಹರಾಜಿನಲ್ಲಿ
ಮಹಿಳಾ ಪ್ರೀಮಿಯರ್ ಲೀಗ್‌ಗಾಗಿ ವಿಶ್ವದಾದ್ಯಂತ 1525 ಆಟಗಾರ್ತಿಯರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದರು. ಆದರೆ ಹರಾಜಿಗಾಗಿ ಬಿಸಿಸಿಐ ಸಿದ್ಧಪಡಿಸಿರುವ ಅಂತಿಮ ಪಟ್ಟಿಯಲ್ಲಿ 409 ಆಟಗಾರ್ತಿಯರು ಸ್ಥಾನ ಪಡೆದಿದ್ದಾರೆ. 409 ಆಟಗಾರ್ತಿಯರಲ್ಲಿ ಪೈಕಿ 246 ಭಾರತೀಯರಿದ್ದರೆ, 163 ವಿದೇಶಿಗರಿದ್ದಾರೆ. ಹಾಗೆಯೇ ಎಂಟು ಆಟಗಾರ್ತಿಯರು ಸಹ ಅಸೋಸಿಯೇಟ್ ದೇಶದವರಾಗಿದ್ದಾರೆ. 409 ರಲ್ಲಿ, 202 ಕ್ಯಾಪ್ಡ್ (ಅಂತರರಾಷ್ಟ್ರೀಯ ಕ್ರಿಕೆಟ್ ಆಡಿದ ಆಟಗಾರ್ತಿಯರು) ಮತ್ತು 199 ಅನ್ ಕ್ಯಾಪ್ಡ್ ಆಟಗಾರ್ತಿಯರಾಗಿದ್ದಾರೆ.
ಹೆಚ್ಚಿನ ಮೂಲ ಬೆಲೆ ಹೊಂದಿರುವ ಆಟಗಾರ್ತಿಯರಿವರು
ನಿಗದಿಯಂತೆ ಒಟ್ಟು 5 ತಂಡಗಳಲ್ಲಿ 90 ಆಟಗಾರ್ತಿಯರಿರಲಿದ್ದು, ಇದರಲ್ಲಿ 30 ವಿದೇಶಿ ಆಟಗಾರ್ತಿಯರು ಸೇರಿದ್ದಾರೆ. ಇದರಲ್ಲಿ ಆಟಗಾರ್ತಿಯರ ಅತ್ಯಧಿಕ ಮೂಲ ಬೆಲೆ 50 ಲಕ್ಷ ರೂ. ಆಗಿದ್ದು, ಈ 50 ಲಕ್ಷ ಮೂಲ ಬೆಲೆಯೊಂದಿಗೆ 24 ಆಟಗಾರ್ತಿಯರು ಹರಾಜಿಗೆ ಪ್ರವೇಶಿಸಲಿದ್ದಾರೆ. ಆಲ್ ರೌಂಡರ್ ಹರ್ಮನ್‌ಪ್ರೀತ್ ಕೌರ್, ಉಪನಾಯಕಿ ಸ್ಮೃತಿ ಮಂಧಾನ, ಅಂಡರ್-19 ವಿಶ್ವ ಚಾಂಪಿಯನ್ ಶಫಾಲಿ ವರ್ಮಾ ಸೇರಿದಂತೆ ಹತ್ತು ಭಾರತೀಯ ಆಟಗಾರ್ತಿಯರು ಈ ವಿಭಾಗದಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಹಾಗೆಯೇ 14 ವಿದೇಶಿ ಆಟಗಾರ್ತಿಯರು 50 ಲಕ್ಷ ರೂ. ಮೂಲ ಬೆಲೆಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಇನ್ನುಳಿದಂತೆ 30 ಆಟಗಾರ್ತಿಯರು 40 ಲಕ್ಷ ರೂ. ಮೂಲ ಬೆಲೆಯೊಂದಿಗೆ ಹರಾಜಿಗೆ ಎಂಟ್ರಿಕೊಡಲಿದ್ದು, ಉಳಿದ ಆಟಗಾರ್ತಿಯರು 30 ಲಕ್ಷ ರೂ. ಮೂಲ ಬೆಲೆಯೊಂದಿಗೆ ಹರಾಜಾಗಲಿದ್ದಾರೆ.
50 ಲಕ್ಷ ಮೂಲ ಬೆಲೆಯ ಹೊಂದಿರುವ ಆಟಗಾರ್ತಿಯರ ಪಟ್ಟಿ
ಭಾರತ: ಹರ್ಮನ್‌ಪ್ರೀತ್ ಕೌರ್, ಸ್ಮೃತಿ ಮಂಧಾನ, ರಿಚಾ ಘೋಷ್, ಸ್ನೇಹ ರಾಣಾ, ಮೇಘನಾ ಸಿಂಗ್, ದೀಪ್ತಿ ಶರ್ಮಾ, ರೇಣುಕಾ ಸಿಂಗ್, ಜೆಮಿಮಾ ರಾಡ್ರಿಗಸ್, ಶೆಫಾಲಿ ವರ್ಮಾ, ಪೂಜಾ ವಸ್ತ್ರಾಕರ್
ಇಂಗ್ಲೆಂಡ್: ಸೋಫಿ ಎಕ್ಲೆಸ್ಟನ್, ನ್ಯಾಟ್ ಸೀವರ್-ಬ್ರಂಟ್, ಡೇನಿಯಲ್ ವ್ಯಾಟ್, ಕ್ಯಾಥರೀನ್ ಬ್ರಂಟ್
ಆಸ್ಟ್ರೇಲಿಯಾ: ಜೆಸ್ ಜೊನಾಸ್ಸೆನ್, ಡಾರ್ಸಿ ಬ್ರೌನ್, ಆಶ್ಲೇ ಗಾರ್ಡ್ನರ್, ಎಲ್ಲಿಸ್ ಪೆರ್ರಿ, ಮೆಗ್ ಲ್ಯಾನಿಂಗ್ ಮತ್ತು ಅಲಿಸ್ಸಾ ಹೀಲಿ
ಜಿಂಬಾಬ್ವೆ: ಲಾರಿನ್ ಫಿರಿ
ನ್ಯೂಜಿಲೆಂಡ್: ಸೋಫಿ ಡಿವೈನ್
ವೆಸ್ಟ್ ಇಂಡೀಸ್: ಡಿಯಾಂಡ್ರಾ ಡಾಟಿನ್
ದಕ್ಷಿಣ ಆಫ್ರಿಕಾ: ಸಿನಾಲೋವಾ ಜಫ್ತಾ
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ತಾಜಾ ಸುದ್ದಿ