ICC Women’s T20 World Cup 2023: ಹರ್ಮನ್‌ಪ್ರೀತ್ ಮತ್ತು ಎಂಎಸ್ ಧೋನಿ ರನೌಟ್ ಆಗಿದ್ದು ಕೋಟಿಗಟ್ಟಲೆ ಜನರ ಹೃದಯ ಒಡೆಯುವಂತೆ ಮಾಡಿದೆ ಎಂದು ಐಸಿಸಿ ಬರೆದುಕೊಂಡಿದೆ.
ಧೋನಿ, ಹರ್ಮನ್‌ಪ್ರೀತ್ ರನೌಟ್
ಮತ್ತೊಮ್ಮೆ ವಿಶ್ವ ಚಾಂಪಿಯನ್ ಆಗುವ ಭಾರತದ ಮಹಾ ಕನಸು ಭಗ್ನಗೊಂಡಿದೆ. ಮಹಿಳಾ ಟಿ20 ವಿಶ್ವಕಪ್‌ನ (Women’s T20 World Cup) ಸೆಮಿಫೈನಲ್‌ನಲ್ಲಿ ಭಾರತ ತಂಡವನ್ನು 5 ರನ್‌ಗಳಿಂದ ಸೋಲಿಸಿದ ಆಸ್ಟ್ರೇಲಿಯಾ (India Vs Australia) ಫೈನಲ್ಗೇರಿದೆ. ಈ ಮೂಲಕ ವಿಶ್ವಕಪ್ ಗೆಲ್ಲಬೇಕೆನ್ನುವ ಹರ್ಮನ್‌ಪ್ರೀತ್ ಕೌರ್ ಮಹದಾಸೆಗೆ ಆಸೀಸ್ ವನಿತೆಯರು ತಣ್ಣೀರೆರಚ್ಚಿದ್ದಾರೆ. ವಾಸ್ತವವಾಗಿ ಆಸೀಸ್ ನೀಡಿದ 173 ರನ್‌ಗಳ ಗುರಿಯನ್ನು ಸುಲಭವಾಗಿ ಸಾಧಿಸುವ ಹಂತದಲ್ಲಿದ್ದ ಟೀಂ ಇಂಡಿಯಾ ನಾಯಕಿಯ ಅದೊಂದು ಅಜಾಗರೂಕತೆಯಿಂದ ಸೋಲನನುಭವಿಸಿತು. ಟೀಂ ಇಂಡಿಯಾ ನಾಯಕಿ ಹರ್ಮನ್‌ಪ್ರೀತ್ ಕೌರ್ (Harmanpreet Kaur) ಗೆಲುವಿಗಾಗಿ ಹೋರಾಟ ನಡೆಸಿದರಾದರೂ, ತಾವು ಮಾಡಿದ ತಪ್ಪಿನಿಂದಲೇ ತಂಡದ ಸೋಲಿಗೆ ಕಾರಣರಾದರು. ಭಾರತದ ಪರ ಗರಿಷ್ಠ 52 ರನ್ ಗಳಿಸಿ, ತಂಡಕ್ಕೆ ಗೆಲುವು ತರಲು ತುದಿಗಾಲಿನಲ್ಲಿ ನಿಂತಿದ್ದ ಹರ್ಮನ್‌ಪ್ರೀತ್ ವಿಕೆಟ್ ಒಪ್ಪಿಸಿದ ರೀತಿ ಮಾತ್ರ ಸಾವಿರಾರು ಅಭಿಮಾನಿಗಳಿಗೆ ಶಾಕ್ ನೀಡಿತು. ಇದೀಗ ಕೌರ್ ರನ್ ಔಟ್ ಆದ ರೀತಿ, ಈ ಹಿಂದೆ, ವಿಶ್ವಕಪ್ ಸೆಮಿಫೈನಲ್‌ನಲ್ಲಿ ಎಂಎಸ್ ಧೋನಿ (Ms Dhoni) ಆಗಿದ್ದ ರನೌಟ್ ನೆನಪಿಸುತ್ತಿದ್ದು, ಈ ಎರಡು ರನೌಟ್ಗಳ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ವಾಸ್ತವವಾಗಿ ಆಸೀಸ್ ನೀಡಿದ ಬೃಹತ್ ಟಾರ್ಗೆಟ್ ಬೆನ್ನಟ್ಟಿದ ಭಾರತ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ತಂಡದ ಟಾಪ್ ಆರ್ಡರ್ ಅಂದರೆ, ಶಫಾಲಿ ವರ್ಮಾ, ಸ್ಮೃತಿ ಮಂಧಾನ, ಯಾಸ್ತಿಕಾ ಭಾಟಿಯಾ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು. ಆದರೆ ತಂಡದ ಜವಬ್ದಾರಿವಹಿಸಿಕೊಂಡ ನಾಯಕಿ ಹರ್ಮನ್‌ಪ್ರೀತ್ ತಂಡದ ಗೆಲುವಿನ ಭರವಸೆಯನ್ನು ಜೀವಂತವಾಗಿಡಲು ಏಕಾಂಗಿ ಹೋರಾಟ ನಡೆಸಿದರು. ಆದರೆ ಪಂದ್ಯವು ನಿರ್ಣಾಯಕ ಹಂತವನ್ನು ತಲುಪಿದಾಗ ಹರ್ಮನ್‌ಪ್ರೀತ್ ವಿಕೆಟ್ ಒಪ್ಪಿಸಿದ ರೀತಿ ಮಾತ್ರ ಕೋಟ್ಯಾಂತರ ಅಭಿಮಾನಿಗಳ ಹೃದಯ ಒಡೆಯುವಂತೆ ಮಾಡಿತು.
IND vs PAK: ಟಿ20 ವಿಶ್ವಕಪ್ನಲ್ಲಿ ಪಾಕ್ ತಂಡಕ್ಕೆ ಮಣ್ಣು ಮುಕ್ಕಿಸಿ 5 ದಾಖಲೆ ನಿರ್ಮಿಸಿದ ಟೀಂ ಇಂಡಿಯಾ..!
ಹರ್ಮನ್‌ಪ್ರೀತ್ ರನ್ ಔಟ್‌ನಿಂದ ಕನಸು ಭಗ್ನ
ವಾಸ್ತವವಾಗಿ ಭಾರತದ ಇನ್ನಿಂಗ್ಸ್ನ 15ನೇ ಓವರ್ನ 5ನೇ ಎಸೆತವನ್ನು ಆಡಿದ ಹರ್ಮನ್‌ಪ್ರೀತ್ ಎರಡು ರನ್ ಕದಿಯಲು ಓಡಿದರು. ಈ ವೇಳೆ ಒಂದು ರನ್ ಅನ್ನು ಸುಲಭವಾಗಿ ತೆಗೆದುಕೊಂಡ ಕೌರ್, ಎರಡನೇ ರನ್ ಅನ್ನು ಸುಲಭವಾಗಿ ತೆಗೆದುಕೊಳ್ಳುವ ಸಲುವಾಗಿ ಓಡಲಾರಂಭಿಸಿದರು. ಆದರೆ ಅವರು ಕ್ರೀಸ್ ಬಳಿಕ ಬರುವಷ್ಟರಲ್ಲೇ ಚೆಂಡು ವಿಕೆಟ್ ಕೀಪರ್ ಹತ್ತಿರ ಬಂದಿತ್ತು. ಇದನ್ನು ಗಮನಿಸಿದ ಕೌರ್ ತಮ್ಮ ಬ್ಯಾಟನ್ನು ಕ್ರೀಸ್ ಒಳಗೆ ಜಾರಿಸಲು ಪ್ರಯತ್ನಿಸಿದರು. ಆದರೆ ನೆಲಕ್ಕೆ ಕಚ್ಚಿಕೊಂಡ ಬ್ಯಾಟ್ ಮುಂದಕ್ಕೆ ಜಾರಲೇ ಇಲ್ಲ. ಹೀಗಾಗಿ ಸಮಯಕ್ಕೆ ಸರಿಯಾಗಿ ಕ್ರೀಸ್ ತಲುಪಲು ಸಾಧ್ಯವಾಗದೆ ಕೌರ್ ರನೌಟ್ ಆಗಿ ಪೆವಿಲಿಯನ್‌ಗೆ ಮರಳಬೇಕಾಯಿತು. ಹರ್ಮನ್‌ಪ್ರೀತ್ ರೂಪದಲ್ಲಿ ಭಾರತಕ್ಕೆ ದೊಡ್ಡ ಪೆಟ್ಟು ಬಿದ್ದಿತು. ಹರ್ಮನ್‌ಪ್ರೀತ್ ಔಟಾದ ಬಳಿಕ ಮತ್ತೊಮ್ಮೆ ಭಾರತದ ಇನ್ನಿಂಗ್ಸ್ ತತ್ತರಿಸಿತು. ಪೆವಿಲಿಯನ್‌ಗೆ ಹಿಂತಿರುಗುವಾಗ ಅವರ ಮುಖದಲ್ಲಿ ಔಟಾದ ನಿರಾಸೆ ಸ್ಪಷ್ಟವಾಗಿ ಕಾಣುತ್ತಿತ್ತು.
ಧೋನಿ ರನೌಟ್ ನೆನಪಾಯ್ತು
ಹರ್ಮನ್‌ಪ್ರೀತ್ ಅವರ ರನ್ ಔಟ್ ಎಲ್ಲರಿಗೂ ಎಂಎಸ್ ಧೋನಿಯನ್ನು ನೆನಪಿಸಿತು. ಇದರ ವಿಡಿಯೋವನ್ನು ಐಸಿಸಿ ಹಂಚಿಕೊಂಡಿದ್ದು, ಹರ್ಮನ್‌ಪ್ರೀತ್ ಮತ್ತು ಎಂಎಸ್ ಧೋನಿ ರನೌಟ್ ಆಗಿದ್ದು ಕೋಟಿಗಟ್ಟಲೆ ಜನರ ಹೃದಯ ಒಡೆಯುವಂತೆ ಮಾಡಿದೆ ಎಂದು ಬರೆದುಕೊಂಡಿದೆ. ವಾಸ್ತವವಾಗಿ, 2019 ರಲ್ಲಿ ನ್ಯೂಜಿಲೆಂಡ್ ವಿರುದ್ಧದ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಪ್ರಮುಖ ವಿಕೆಟ್ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಟೀಂ ಇಂಡಿಯಾಕ್ಕೆ ಧೋನಿ ಆಸರೆಯಾಗಿದ್ದರು.
ಕಣ್ಣೀರಿಟ್ಟಿದ್ದ ಅಭಿಮಾನಿಗಳು
ಈ ಪಂದ್ಯದಲ್ಲಿ ಏಕಾಂಗಿ ಹೋರಾಟ ನಡೆಸಿದ ಧೋನಿ ತಂಡವನ್ನು ಗೆಲುವಿನ ಸಮೀಪಕ್ಕೆ ತಂದರು. ಈ ವೇಳೆ 50 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದ ಧೋನಿ, ಡೀಪ್‌ನಿಂದ ಮಾರ್ಟಿನ್ ಗಪ್ಟಿಲ್ ಎಸೆದ ನೇರ ಎಸೆತದಲ್ಲಿ ರನೌಟ್ ಆದರು. ಸ್ವಲ್ಪದರಲ್ಲೇ ಧೋನಿ ರನೌಟ್ ಆಗಿದ್ದನ್ನು ನೋಡಿದ ತಕ್ಷಣ ಭಾರತೀಯ ಡ್ರೆಸ್ಸಿಂಗ್ ಸೇರಿದಂತೆ ಇಡೀ ದೇಶವೇ ಕಣ್ಣೀರಿಟ್ಟಿತ್ತು. ಸ್ವತಃ ಧೋನಿ ಕೂಡ ಕಣ್ಣಲ್ಲಿ ನೀರು ತುಂಬಿಕೊಂಡು ಪೆವಿಲಿಯನ್‌ಗೆ ಮರಳಿದರು. ಇದೀಗ ಧೋನಿ ರನೌಟ್ ಜೊತೆಗೆ ಹರ್ಮನ್‌ಪ್ರೀತ್ ಆದ ರನ್ ಔಟ್ ವಿಡಿಯೋ ಮತ್ತೊಮ್ಮೆ ಕೋಟ್ಯಂತರ ಭಾರತೀಯರ ಹೃದಯ ಒಡೆಯುವಂತೆ ಮಾಡಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ